ಲಖನೌ: ಬರೇಲಿಯಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಆಗಿ ನೇಮಕಗೊಂಡ ಪಿಸಿಎಸ್ ಅಧಿಕಾರಿ ಜ್ಯೋತಿ ಮೌರ್ಯ ಮತ್ತು ಅವರ ಪತಿ ಅಲೋಕ್ ಮೌರ್ಯ ನಡುವೆ ನಡೆಯುತ್ತಿರುವ ವಿವಾದವು ಅನೇಕ ತಿರುವು ಪಡೆದುಕೊಳ್ಳುತ್ತಲೇ ಇದೆ.
ಅಲ್ಲದೆ ಇದು 1999ರಲ್ಲಿ ಬಿಡುಗಡೆಯಾಗಿದ್ದ 'ಸೂರ್ಯವಂಶಂ' ಸಿನಿಮಾಕ್ಕೆ ಹೋಲುತ್ತಿದೆ. ಆ ಚಿತ್ರದಲ್ಲಿ ಸಾರಿಗೆ ಕಂಪನಿಯ ಕಾರ್ಮಿಕನೊಬ್ಬ ತನ್ನ ಹೆಂಡತಿಯನ್ನು ಐಎಎಸ್ ಓದಲು ಉತ್ತೇಜಿಸುತ್ತಾನೆ. ಅದರಂತೆ ಆಕೆ ಓದಿ ತವರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುತ್ತಾಳೆ. ಅದೇ ರೀತಿಯ ಘಟನೆ ಇದೀಗ ನಡೆದಿದೆ. ಜ್ಯೋತಿ ತನ್ನ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ತನ್ನ ಫೋನ್ ಅನ್ನು ಹ್ಯಾಕ್ ಮಾಡಿದ್ದು ತಮ್ಮ ವಿರುದ್ಧ ಸುಳ್ಳು ಪುರಾವೆಗಳನ್ನು ನೆಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಡಿಯೊ ಕ್ಲಿಪ್‌ನಲ್ಲಿ, ಜ್ಯೋತಿ ತನ್ನ ಪತಿಗೆ ನೀವು ವರದಕ್ಷಿಣೆಯಾಗಿ 5000 ರೂಪಾಯಿ ತೆಗೆದುಕೊಂಡಿದ್ದೀರಿ, ಆದರೂ ನೀವು ಹಣ ಮತ್ತು ಕಾರಿಗಾಗಿ ನನಗೆ ಕಿರುಕುಳ ನೀಡಿದ್ದೀರಿ ಎಂದು ಕೇಳಿದ್ದಾರೆ.
ಜ್ಯೋತಿ ಅಲೋಕ್ ನನ್ನು ಮೋಸಗಾರ ಎಂದು ಕರೆದಿದ್ದಾರೆ. ಅಲೋಕ್ ತಮ್ಮ ಮದುವೆಗೂ ಮೊದಲು ಗ್ರಾಮ ಪಂಚಾಯತ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಆದರೆ ಆತ ನಿಜವಾಗಿಯೂ 'ಸ್ವೀಪರ್' ಆಗಿ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
2010 ರಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಜ್ಯೋತಿ ಅಲೋಕ್ ಮೌರ್ಯ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಅಲೋಕ್ ಮತ್ತು ಅವರ ಪೋಷಕರು ಪ್ರಯಾಗರಾಜ್‌ನಲ್ಲಿ UPPSC(ಉತ್ತರ ಪ್ರದೇಶ ನಾಗರಿಕ ಸೇವಾ ಆಯೋಗ) ಗಾಗಿ ತಯಾರಿ ನಡೆಸಲು ಜ್ಯೋತಿಗೆ ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಜ್ಯೋತಿಯ ಶಿಕ್ಷಣವನ್ನು ಬೆಂಬಲಿಸಿದ ಮತ್ತು ಧನಸಹಾಯ ಮಾಡಿದವನು ಅಂತಿಮವಾಗಿ ರಾಜ್ಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡಿದ್ದನು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಜ್ಯೋತಿ ಮೌರ್ಯ ಅವರು ಈ ವಿಷಯವು ಸಂಪೂರ್ಣವಾಗಿ ಗಂಡ ಮತ್ತು ಹೆಂಡತಿಯ ನಡುವಿನ ವಿವಾದವಾಗಿದೆ. ಎಸ್‌ಡಿಎಂ ಮತ್ತು ಸ್ವೀಪರ್ ನಡುವಿನ ವಿವಾದವಲ್ಲ ಎಂದು ಹೇಳಿದರು. ಅಲೋಕ್ ಸ್ವೀಪರ್ ಆಗಿರುವುದರಿಂದ ತನಗೆ ಯಾವುದೇ ತೊಂದರೆ ಇಲ್ಲ ಎಂದೂ ಹೇಳಿದಳು. ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಆಕೆ ನಿರಾಕರಿಸಿದರು. ನನ್ನ ಪ್ರಕರಣ ನ್ಯಾಯಾಲಯದಲ್ಲಿದೆ. ನನ್ನ ಮಾತುಗಳನ್ನು ನ್ಯಾಯಾಲಯದಲ್ಲಿಯೇ ಹೇಳುತ್ತೇನೆ. ಜನತೆ ಏನು ಬೇಕು ಎಂದು ಯೋಚಿಸಲಿ ಎಂದರು.
ತನ್ನ ಹೋಮ್ ಗಾರ್ಡ್ ಕಮಾಂಡೆಂಟ್ ಮನೀಶ್ ದುಬೆಯೊಂದಿಗೆ ಸಂಬಂಧ ಹೊಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜ್ಯೋತಿ, ಇದು ತನ್ನ ವೈಯಕ್ತಿಕ ವಿಷಯ ಎಂದು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಅಲೋಕ್ ಅವರು ಜ್ಯೋತಿ ವಿರುದ್ಧ ಭ್ರಷ್ಟಾಚಾರದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಆಕೆ ಮತ್ತು ದುಬೆ ತನ್ನನ್ನು ಕೊಲೆ ಮಾಡಲು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದಾನೆ.