ಲಖನೌ: ಭಾರತೀಯ ಜನಸಂಘದ ಸ್ಥಾಪಕ, ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರಿಸಿಕೊಂಡು ಬರುತ್ತಿದ್ದಾರೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಶ್ಯಾಮ ಪ್ರಸಾದ್ ಅವರ 123ನೇ ಜನ್ಮದಿನದ ಅಂಗವಾಗಿ ಇಲ್ಲಿನ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಮುಖರ್ಜಿ ಅವರ ತ್ಯಾಗವನ್ನು ಭಾರತೀಯರು ಸದಾ ನೆನಪಿಸಿಕೊಳ್ಳುಬೇಕು.
ಜವಾಹರಲಾಲ್ ನೆಹರು ಸರ್ಕಾರದಲ್ಲಿ ಸಚಿವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ, ಸರ್ಕಾರದ 'ತುಷ್ಟೀಕರಣ' ನೀತಿ ಅಳವಡಿಸಿಕೊಂಡಾಗ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.
ನೆಹರು ಸರ್ಕಾರದಲ್ಲಿ, ಭಾರತದ ಸಂವಿಧಾನಕ್ಕೆ 370ನೇ ವಿಧಿಯನ್ನು ಸೇರಿಸುವುದರ ವಿಚಾರದಲ್ಲಿ ನೆಹರು ಹಾಗೂ ಮುಖರ್ಜಿ ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾದವು. ಒಂದು ದೇಶವು ಎರಡು ಸಂವಿಧಾನ, ಇಬ್ಬರು ಪ್ರಧಾನಿ ಮಂತ್ರಿಗಳು, ಎರಡು ಲಾಂಛನ ಹೊಂದಿರಲು ಸಾಧ್ಯವಿಲ್ಲ ಎಂದು ಮುಖರ್ಜಿ ಅವರು ವಿರೋಧಿಸಿದ್ದರು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಉಪಕುಪತಿಯಾಗಿ ಸೇವೆ ಸಲ್ಲಿಸಿದ ಮುಖರ್ಜಿ, ಬಂಗಾಳದಲ್ಲಿ ಉಂಟಾಗಿದ್ದ ಕ್ಷಾಮದ ಸಮಯದಲ್ಲಿ ಮಾದರಿ ಮಾನವತಾವಾದವನ್ನು ಪ್ರತಿಪಾದಿಸಿದರು ಎಂದು ಯೋಗಿ ಹೇಳಿದ್ದಾರೆ
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಪ್ರಧಾನಿ ಮೋದಿ ಸರ್ಕಾರವು ಮುಖರ್ಜಿ ಅವರ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.