ನವದೆಹಲಿ: ಧಾರಾಕಾರ ಮಳೆ, ಜೋರಾಗಿ ಬೀಸುತ್ತಿದ್ದ ಗಾಳಿಯು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾನುವಾರ ಜನರನ್ನು ಸಂಕಷ್ಟಕ್ಕೆ ದೂಡಿದೆ. ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಯಮುನಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉದ್ಯಾನಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆಗಳು, ಹಲವಾರು ಆಸ್ಪತ್ರೆಗಳ ಆವರಣಗಳು ಮಳೆ ನೀರಿನಲ್ಲಿ ಮುಳುಗಿದ ಪರಿಣಾಮ ಜನರು ತೊಂದರೆ ಅನುಭವಿಸಿದರು. ಮಳೆಯೊಂದಿಗೆ ಜೋರಾದ ಗಾಳಿ ಬೀಸಿದ್ದರಿಂದಾಗಿ ವಿದ್ಯುತ್ ಹಾಗೂ ಇಂಟರ್‌ನೆಟ್ ಸೇವೆಯಲ್ಲಿ ಕೂಡ ಭಾರಿ ವ್ಯತ್ಯಯ ಉಂಟಾಗಿತ್ತು.
ದೆಹಲಿ, ಗುರುಗ್ರಾಮದ ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ನೀರಿನಲ್ಲಿ ಸಿಲುಕಿದ್ದ ವಾಹನಗಳು, ಮೊಣಕಾಲುವರೆಗೆ ನಿಂತಿದ್ದ ನೀರಿನಲ್ಲಿ ಜನರು ಓಡಾಲು ಕಷ್ಟಪಡುತ್ತಿದ್ದ ದೃಶ್ಯಗಳಿರುವ ವಿಡಿಯೊಗಳು, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.
ಸಾವು-ನೋವು: ಹಿಮಾಚಲ ಪ್ರದೇಶದ ಹಲವಡೆ ಭೂಕುಸಿತ ಉಂಟಾಗಿ ಸಂಭವಿಸಿದ ಅವಘಡಗಳಲ್ಲಿ ಐವರು ಮೃತಪಟ್ಟಿದ್ದಾರೆ.
ಶಿಮ್ಲಾ ಜಿಲ್ಲೆಯ ಕೋಟ್ಗಢದಲ್ಲಿ ಮನೆಯೊಂದು ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಅನಿಲ್, ಅವರ ಪತ್ನಿ ಕಿರಣ್ ಹಾಗೂ ಪುತ್ರ ಸ್ವಪ್ನಿಲ್ ಎಂದು ಗುರುತಿಸಲಾಗಿದೆ.
ಕುಲು ಪಟ್ಟಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಮನೆಯೊಂದು ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ, ಚಂಬಾ ಜಿಲ್ಲೆಯ ಕಟಿಯಾನ್ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ವ್ಯಕ್ತಿಯೊಬ್ಬ ಜೀವಂತ ಸಮಾಧಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಜಫ್ಫನಗರ ಜಿಲ್ಲೆಯ ನಿಯಾಜುರ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿತು ತಾಯಿ-ಮಗಳು ಮೃತಪಟ್ಟಿದ್ದಾರೆ. 6 ವರ್ಷದ ಬಾಲಕಿ ಮಾನಸಿ ಹಾಗೂ ಕವಿತಾ (26) ಮೃತಪಟ್ಟಿದ್ದು, ಪತಿ ಅಕ್ಷಯ್‌ಕುಮಾರ್ ಅವರಿಗೆ ಗಾಯಗಳಾಗಿವೆ.
ಕೌಶಾಂಬಿಯಲ್ಲಿ ಮರದ ರೆಂಬೆಗಳು ಮನೆ ಚಾವಣಿಯ ತಗಡಿನ ಮೇಲೆ ಬಿದ್ದ ಪರಿಣಾಮ, ಅನಾಮಿಕಾ (10) ಎಂಬ ಬಾಲಕಿ ಮೃತಪಟ್ಟಿದ್ದು, ಆಕೆಯ ಸಹೋದರನಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ತೆಹ್ರಿ ಗರ್ಹವಾಲ್ ಜಿಲ್ಲೆಯಲ್ಲಿ ಗುಡ್ಡ ಕುಸಿದು ಉರುಳಿದ ಕಲ್ಲುಗಳು ಡಿಕ್ಕಿ ಹೊಡೆದ ಪರಿಣಾಮ ವಾಹನವೊಂದು ಗಂಗಾ ನದಿಯಲ್ಲಿ ಬಿದ್ದು ಮೂವರು ಮೃತಪಟ್ಟಿದ್ದು, ಇತರ ಮೂವರು ನಾಪತ್ತೆಯಾಗಿದ್ದಾರೆ.
ಹೃಷಿಕೇಶದಿಂದ ಕೇದಾರನಾಥಕ್ಕೆ ಹೊರಟಿದ್ದ ಈ ವಾಹನದಲ್ಲಿ 11 ಮಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಾನಕೋಟ್ ಎಂಬಲ್ಲಿನ ಡೋಗ್ರಾ ಕಾಲುವೆಯನ್ನು ದಾಟುವ ವೇಳೆ, ದಿಢೀರ್ ಪ್ರವಾಹ ಉಂಟಾಗಿ ಸೇನೆಯ ಇಬ್ಬರು ಯೋಧರು ಕೊಚ್ಚಿಕೊಂಡು ಹೋಗಿದ್ದಾರೆ. ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಹಾಗೂ ಲಾನ್ಸ್ ನಾಯಕ್ ತೇಲುರಾಮ್ ಮೃತ ಯೋಧರು.
'ಗಸ್ತಿನಲ್ಲಿದ್ದ ತೇಲುರಾಮ್ ಅವರು ಬೆಟ್ಟಗಳಲ್ಲಿರುವ ತೊರೆಯನ್ನು ದಾಟಲು ಹೋದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ತೇಲುರಾಮ್ ಅವರನ್ನು ರಕ್ಷಿಸಲು ಹೋದ ಕುಲದೀಪ್ ಸಿಂಗ್ ಅವರೂ ಸಾವನ್ನಪ್ಪಿದರು' ಎಂದು ಸೇನೆ ಟ್ವೀಟ್ ಮಾಡಿದೆ.
ದೋಡಾ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಕಲ್ಲುಬಂಡೆಗಳು ಬಸ್‌ವೊಂದಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾನಿ-ತೊಂದರೆ: ಹರಿಯಾಣ ಮತ್ತು ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಮಳೆ ನೀರು ಮನೆಗಳಿಗೆ, ಅಂಗಡಿಗಳಿಗೆ ನುಗ್ಗಿದೆ. ಉಭಯ ರಾಜ್ಯಗಳ ರಾಜಧಾನಿಯಾದ ಚಂಡೀಗಢದಲ್ಲಿ ಮಳೆ ಸುರಿಯುತ್ತಿದೆ.
ಅಕಾಲಿಕ ಹಿಮಪಾತ ಮತ್ತು ಭಾರಿ ಮಳೆಯಿಂದಾಗಿ ಲಡಾಖ್ ಜನರು ತೊಂದರೆ ಅನುಭವಿಸಿದರು. ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಮಾಯುರು ಎಂಬಲ್ಲಿ ಭೂಕುಸಿತ ಉಂಟಾದ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ರಾಜ್ಯಕ್ಕೆ ಭೇಟಿ ನೀಡಿರುವ ಯಾತ್ರಾರ್ಥಿಗಳು ಹವಾಮಾನ ಕುರಿತು ಮಾಹಿತಿ ಪಡೆದ ನಂತರವೇ ಪ್ರವಾಸವನ್ನು ಯೋಜಿಸಬೇಕು' ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಸಿಗರು ಹಾಗೂ ಸ್ಥಳೀಯರು ಪ್ರಯಾಣವನ್ನು ಮುಂದೂಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಯಾತ್ರೆ ಮತ್ತೆ ಆರಂಭ: ಪ್ರತಿಕೂಲ ಹವಾಮಾನ ಕಾರಣ ಮೂರು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಅಮರನಾಥ ಯಾತ್ರೆಯನ್ನು ಭಾನುವಾರ ಪುನಃ ಆರಂಭಿಸಲಾಯಿತು. ಜಮ್ಮು-ಕಾಶ್ಮೀರದ ಪಂಜ್‌ತರಣಿ ಹಾಗೂ ಶೇಷನಾಗ್‌ದಲ್ಲಿನ ಶಿಬಿರಗಳಲ್ಲಿದ್ದ ಯಾತ್ರಿಗಳು ಪ್ರಯಾಣ ಮುಂದುವರಿಸಿದರು.
ಪ್ರಮುಖ ಅಂಶಗಳು..........
* ಹಿಮಾಚಲ ಪ್ರದೇಶದಲ್ಲಿ ಜುಲೈ 10 ಮತ್ತು 11ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
* ದೆಹಲಿಯಲ್ಲಿ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ
* ಅಕಾಲಿಕ ಹಿಮಪಾತದಿಂದಾಗಿ ಕಾರ್ಗಿಲ್ ಜಿಲ್ಲೆಯ ರಂಗ್ಡುಮ್ ಗ್ರಾಮದಲ್ಲಿ ಮೂರು ಇಂಚುಗಳಷ್ಟು ಹಿಮ ಬಿದ್ದಿತ್ತು. ಲಡಾಖ್‌ನ ಪೆನ್‌ಸಿ ಲಾ, ಜನ್ಸ್‌ಕಾರ್ ಗುಡ್ಡಗಾಡು ಪ್ರದೇಶಗಳು ಹಿಮಚ್ಛಾದಿತವಾಗಿದ್ದವು
* ಭಾರಿ ಮಳೆ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆ ಚುರುಕು ನೀಡುವ ಉದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎಲ್ಲ ಸರ್ಕಾರಿ ಅಧಿಕಾರಿಗಳ ಭಾನುವಾರದ ರಜೆಯನ್ನು ರದ್ದುಗೊಳಿಸಿದ್ದರು
* ಹಿಮಾಚಲಪ್ರದೇಶದಲ್ಲಿ 14 ಕಡೆಗಳಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, 13 ಕಡೆಗಳಲ್ಲಿ ದಿಢೀರ್ ಪ್ರವಾಹ ಕಂಡುಬಂದಿದೆ
* ಶಿಮ್ಲಾ ಮತ್ತು ಕಲ್ಕಾ ನಡುವಿನ 'ಯುನೆಸ್ಕೊ ಪಾರಂಪರಿಕ ರೈಲು ಮಾರ್ಗ'ದಲ್ಲಿ ಎಲ್ಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ
* ಉತ್ತರ ರೈಲ್ವೆಯು 17 ರೈಲುಗಳ ಸಂಚಾರ ರದ್ದುಪಡಿಸಿದ್ದು, 12 ರೈಲುಗಳ ಮಾರ್ಗ ಬದಲಾಯಿಸಿದೆ
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಕರ್ತವ್ಯನಿರತರಾಗಿದ್ದ ಯೋಧರಾದ ಲಾನ್ಸ್‌ನಾಯಕ್ ತೇಲುರಾಮ್ ಹಾಗೂ ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ -ಪಿಟಿಐ ಚಿತ್ರಕಾಶ್ಮೀರ: ಪ್ರವಾಹ ಇಳಿಮುಖ
: ಝೀಲಂ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಹೀಗಾಗಿ ಶ್ರೀನಗರ ಸೇರಿದಂತೆ ಕಾಶ್ಮೀರದ ತಗ್ಗುಪ್ರದೇಶಗಳಲ್ಲಿರುವ ಜನರು ಭಾನುವಾರ ನಿಟ್ಟುಸಿರು ಬಿಟ್ಟರು. 'ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ವಾತಾವರಣವೂ ಸುಧಾರಿಸುತ್ತಿದೆ. ಆದರೆ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಕಾರಣ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಮುನ್ನೆಚ್ಚರಿಕೆ ವಹಿಸಬೇಕು' ಎಂದು ಐಎಂಡಿ ಅಧಿಕಾರಿ ಫಾರೂಕ್ ಅಹ್ಮದ್ ಭಟ್ ಹೇಳಿದ್ದಾರೆ. ವಾಡಿಕೆಗಿಂತ ಹೆಚ್ಚು ಮಳೆ ದೇಶದ ಮಧ್ಯ ಭಾಗದ ಬಹುತೇಕ ರೈತರು ಮುಂಗಾರನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ವಾಡಿಕೆ ಮಳೆ 25.51 ಸೆಂ.ಮೀ. ಇದ್ದು ಭಾನುವಾರದ ವರೆಗೆ 26.49 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ವಾಡಿಕೆಗಿಂತ ಶೇ 4ರಷ್ಟು ಹೆಚ್ಚು ಮಳೆಯಾಗಿದೆ.
ಮುಂಗಾರು ತಡವಾದ ಕಾರಣ ದೇಶದ ಕೇಂದ್ರ ಭಾಗದ ರಾಜ್ಯಗಳಲ್ಲಿ ಬಿತ್ತನೆ ಎರಡು ವಾರಗಳ ಕಾಲ ತಡವಾಗಿತ್ತು. ಈಗ ಸುರಿದ ಮಳೆಯು ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 45ರಷ್ಟಿದ್ದ ಮಳೆ ಕೊರತೆ ಪ್ರಮಾಣ ಈಗ ಶೇ 23ಕ್ಕೆ ಇಳಿದಿದೆ. ವಾಯವ್ಯ ಭಾರತದಲ್ಲಿ ಕೂಡ ಮುಂಗಾರು ಪೂರ್ವದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಶೇ 17ರಷ್ಟು ಮಳೆ ಕೊರತೆ ಇದೆ ಎಂದು ಐಎಂಡಿ ತಿಳಿಸಿದೆ.
ಮಾಹಿತಿ ಪಡೆದ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಕರೆ ಮಾಡಿ ಮಳೆಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದ ಅಮರನಾಥ ಯಾತ್ರೆ ಹಾಗೂ ದೆಹಲಿಯಲ್ಲಿನ ಪರಿಸ್ಥಿತಿ ಕುರಿತು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಂದ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.