ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಮುನ್ನ ರಣತಂತ್ರ ರೂಪಿಸುವ ಕುರಿತು ಚರ್ಚಿಸಲು 26 ವಿರೋಧ ಪಕ್ಷಗಳ ನಾಯಕರು ಇಂದು ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದು, ಅಧಿಕಾರ ಅಥವಾ ಪ್ರಧಾನಿ ಹುದ್ದೆಯ ಮೇಲೆ ಕಾಂಗ್ರೆಸ್‌ಗೆ ಆಸಕ್ತಿ ಇಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ಪ್ರತಿಪಕ್ಷಗಳ ಪ್ರಮುಖ ಸಭೆಯ ಎರಡನೇ ದಿನದ ಉದ್ಘಾಟನಾ ಭಾಷಣದಲ್ಲಿ, 'ಈ ಸಭೆಯಲ್ಲಿ ನಮ್ಮ ಉದ್ದೇಶವೇನೆಂದರೆ, ಅಧಿಕಾರವನ್ನು ಗಳಿಸುವುದಲ್ಲ. ಇದು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದಾಗಿದೆ' ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿ ವಿರೋಧ ಪಕ್ಷಗಳ ನಾಯಕರಲ್ಲಿನ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡ ಅವರು, ಆದರೆ ಇದು ಸೈದ್ಧಾಂತಿಕವಾಗಿರುವ ಭಿನ್ನಾಭಿಪ್ರಾಯಗಳಲ್ಲ ಎಂದು ಹೇಳಿದರು.
'ಈ ಭಿನ್ನಾಭಿಪ್ರಾಯಗಳು ಅಷ್ಟು ದೊಡ್ಡದಲ್ಲ. ಹಣದುಬ್ಬರದಿಂದ ಬಳಲುತ್ತಿರುವ ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರ ಸಲುವಾಗಿ, ನಿರುದ್ಯೋಗದಿಂದ ಬಳಲುತ್ತಿರುವ ನಮ್ಮ ಯುವಕರ ಸಲುವಾಗಿ, ಬಡವರ ಪರವಾಗಿ ನಾವು ಒಟ್ಟಾಗಿ ಹೋರಾಡಬೇಕಿದೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ತೆರೆಮರೆಯಲ್ಲಿ ಮೌನವಾಗಿ ಹತ್ತಿಕ್ಕಲಾಗುತ್ತಿದೆ' ಎಂದು ದೂರಿದರು.
ಇದೀಗ 26 ವಿರೋಧ ಪಕ್ಷಗಳು ಒಟ್ಟಾಗಿದ್ದು, ಇಂದು 11 ರಾಜ್ಯಗಳಲ್ಲಿ ವಿಪಕ್ಷಗಳ ನೇತೃತ್ವದ ಸರ್ಕಾರವಿದೆ ಎಂದರು.
'ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಾನಾಗಿಯೇ 303 ಸ್ಥಾನಗಳು ಬರಲಿಲ್ಲ. ಅದು ಮಿತ್ರಪಕ್ಷಗಳ ಮತಗಳನ್ನು ಬಳಸಿಕೊಂಡಿತು ಮತ್ತು ಅಧಿಕಾರಕ್ಕೆ ಬಂದಿತು. ನಂತರ ಮಿತ್ರ ಪಕ್ಷಗಳನ್ನು ತಿರಸ್ಕರಿಸಿತು. ಇಂದು ಬಿಜೆಪಿ ಅಧ್ಯಕ್ಷರು ಮತ್ತು ಅದರ ನಾಯಕರು ತಮ್ಮ ಹಳೆಯ ಮಿತ್ರರನ್ನು ಒಟ್ಟುಗೂಡಿಸಲು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ' ಎಂದು ಅವರು ಹೇಳಿದರು.
ಸಭೆಗೆ ಆಗಮಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಇಂದು ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಬೆಂಗಳೂರಿಗೆ ಆಗಮಿಸಿದರು. ರಾಜ್ಯದ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಮಾನ ನಿಲ್ದಾಣದಲ್ಲಿ ಎನ್‌ಸಿಪಿ ವರಿಷ್ಠರನ್ನು ಬರಮಾಡಿಕೊಂಡರು.
ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರು ಸಭೆಗೆ ಹಾಜರಾಗುವುದು ಅನುಮಾನ ಎಂದು ಮೂಲಗಳು ತಿಳಿಸಿದ್ದವು. ಆದರೆ, ಅವರ ಆಗಮನವು ಮಹಾಘಟಬಂಧನಕ್ಕೆ ಮತ್ತಷ್ಟು ಶಕ್ತಿ ನೀಡಿದೆ.