ಕಾಸರಗೋಡು: ಮುಂಗಾರು ಬಿರುಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸದುರ್ಗ ತಾಲೂಕು ಮತ್ತು ವೆಳ್ಳರಿಕುಂದ ತಾಲೂಕಿನಲ್ಲಿ ಎರಡು ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ.
ಹೊಸದುರ್ಗ ತಾಲೂಕಿನ ಪಳ್ಳಿಕೆರೆ ಅಂಗನವಾಡಿ ಸಂಖ್ಯೆ 65 ರಲ್ಲಿ ಶಿಬಿರವನ್ನು ತೆರೆಯಲಾಗಿದ್ದು, ಪ್ರತಿ ಕುಟುಂಬದ ಇಬ್ಬರು ಸದಸ್ಯರನ್ನು ಶಿಬಿರಕ್ಕೆ ವರ್ಗಾಯಿಸಲಾಯಿತು. ಕಾಸರಗೋಡು ತಾಲೂಕಿನ ಮಧೂರು ಗ್ರೂಪ್, ಪಟ್ಲ ಗ್ರಾಮದ ಮೊಗರು, ಸ್ರಾಬ್ಡಿ ಪ್ರದೇಶದ 45 ಕುಟುಂಬಗಳು ಹಾಗೂ ನೆಕ್ರಾಜೆ ಗ್ರಾಮದ ಪಾಡಿ ಗುಂಪಿನ ಮೂರು ಕುಟುಂಬಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಯಿತು.
ವೆಳ್ಳರಿಕುಂಡ್ ತಾಲೂಕಿನ ಮಾಲೋತ್ ಗ್ರಾಮದ ಪೂಂಜ ಮತ್ತು ಚೇತಿಪುಳ ಕಾಲೋನಿಯ 2 ಕುಟುಂಬಗಳ 14 ಮಂದಿ ಹಾಗೂ ಕಿನಾನೂರು ಗ್ರಾಮದ 5 ಕುಟುಂಬಗಳ 15 ಮಂದಿ ಅವರ ಸಂಬಂಧಿಕರ ಮನೆಗೆ ತೆರಳಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ:
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಸನ್ನದ್ಧತೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು ಉಪಸ್ಥಿತರಿದ್ದರು. ಹೊಜದುರ್ಗ ತಾಲೂಕಿನ ಐದು ಪ್ರವಾಹ ಪೀಡಿತ ಗ್ರಾಮ ಕಚೇರಿಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ತಾಲೂಕು ವ್ಯಾಪ್ತಿಯಲ್ಲಿ ಇರುವ 39 ಶಿಬಿರಗಳಲ್ಲಿ 3700 ಜನರಿಗೆ ವಸತಿ ಕಲ್ಪಿಸಿರುವ ಬಗ್ಗೆ ತಹಸೀಲ್ದಾರ್ ಸಭೆಗೆ ಮಾಹಿತಿ ನೀಡಿದರು.
ಕಳೆದ ವರ್ಷ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಚಿಮೇನಿ, ಕಳ್ಳಾರ್ ಮತ್ತು ಪರಪ್ಪದಲ್ಲಿಪ್ರತ್ಯೇಕ ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಪನತ್ತಡಿ ಕಮ್ಮಡತ್ ಕಾಲೋನಿಯ 10 ಕುಟುಂಬಗಳನ್ನು ತುರ್ತು ಪರಿಸ್ಥಿತಿಯಲ್ಲಿ ಸ್ಥಳಾಂತರಿಸಲು ಶಿಬಿರ ಸಿದ್ಧವಾಗಿದೆ. ತಾಲೂಕಿನಲ್ಲಿ ಶಿಬಿರಗಳಿಗೆ ಗುರುತಿಸಿರುವ 36 ಕಟ್ಟಡಗಳಲ್ಲಿ 2000 ಜನರು ವಾಸ ಮಾಡಬಹುದು ಎಂದು ವೆಳ್ಳರಿಕುಂಡ್ ತಹಸೀಲ್ದಾರ್ ತಿಳಿಸಿದ್ದಾರೆ.
ಮಧುವಾಹಿನಿ ನದಿ ಉಕ್ಕಿ ಹರಿಯುತ್ತಿದ್ದು, ಸುಮಾರು 50 ಕುಟುಂಬಗಳನ್ನು ಅಗ್ನಿಶಾಮಕ ದಳದ ನೆರವಿನಿಂದ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಾಸರಗೋಡು ತಹಸೀಲ್ದಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 34 ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 3000 ಜನರಿಗೆ ಅವಕಾಶ ಕಲ್ಪಿಸಬಹುದಗಿದೆ. ನೆಕ್ರಾಜೆ ಗ್ರಾಮದ ಮನೆಯೊಂದಕ್ಕೆ ಗುಡ್ಡ ಕುಸಿದಿದ್ದು ಹಾನಿ ಸಂಭವಿಸಿದೆ. ಸ್ಥಳೀಯಡಳಿತ ಸಂಸ್ಥೆ ಕಾರ್ಯದರ್ಶಿಗಳ ನೇತೃತ್ವದಲ್ಲಿ 55 ಶಾಲೆಗಳು ಹಾಗೂ 10 ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಪಂಚಯಿತಿ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ತಿಳಿಸಿದ್ದಾರೆ. ಅಪಾಯಕರಿಯಗಿರುವ 132 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ಪಟ್ಟಿ ಸಿದ್ಧಪಡಿಸಲಾಗಿದೆ ಮತ್ತು ಎಲ್ಲಾ ಪಂಚಾಯಿತಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಟ್ರಾಲಿಂಗ್ ನಿಷೇಧದ ಅವಧಿಯಾಗಿರುವುದರಿಂದ ಮೀನುಗಾರರ ವ್ಯವಹಾರಗಳನ್ನು ನೋಡಿಕೊಳ್ಳುವಂತೆ ಮೀನುಗಾರಿಕೆ ಇಲಾಖೆಗೆ ಸೂಚನೆ ನೀಡಲಾಗಿದೆ.
ಕಯಾಕಿಂಗ್, ಟ್ರೆಕ್ಕಿಂಗ್ ಮತ್ತು ಬೀಚ್‍ಗಳಿಗೆ ಪ್ರವೇಶ ಸೇರಿದಂತೆ ಎಲ್ಲಾ ನೀರಿನ ಚಟುವಟಿಕೆಗಳ ಮೇಲೆ ಜುಲೈ 10 ರವರೆಗೆ ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಜುಲೈ 10 ರವರೆಗೆ ಹೌಸ್‍ಬೋಟ್ ಸೇರಿದಂತೆ ಎಲ್ಲಾ ವಾಹನಗಳ ಮೇಲೆ ತಕ್ಷಣದ ಪ್ರಯಾಣ ನಿಷೇಧವನ್ನು ಹೇರಲಾಗಿದೆ.