ನವದೆಹಲಿ: ಮೇ 4 ರಂದು ಮಣಿಪುರದಲ್ಲಿ ಗುಂಪೊಂದು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
ರಾಜ್ಯದಲ್ಲಿನ ಎರಡು ಸಮುದಾಯದ ಪೈಕಿ ಒಂದು ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಇನ್ನೊಂದು ಸಮುದಾಯದ ಪುರುಷರು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿರುವುದನ್ನು ತೋರಿಸುವ ವಿಡಿಯೋ ಜುಲೈ 19ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಪರಿಣಾಮವಾಗಿ ಈಶಾನ್ಯ ರಾಜ್ಯದಲ್ಲಿ ನಡೆದ ಅಪರಾಧಗಳ ಬಗ್ಗೆ ದೇಶದಾದ್ಯಂತ ತೀವ್ರ ಕೋಲಾಹಲ ಉಂಟಾಗಿದೆ.ವ್ಯಾಪಕ ಖಂಡನೆಗೆ ಗುರಿಯಾದ ವಿಡಿಯೋದಲ್ಲಿ, ಪುರುಷರು ಇಬ್ಬರು ಮಹಿಳೆಯರಿಗೆ ನಿರಂತರವಾಗಿ ಕಿರುಕುಳ ನೀಡುವುದನ್ನು ತೋರಿಸುತ್ತದೆ. ಅವರು ಈ ವೇಳೆ ಎಷ್ಟೇ ಅತ್ತು ಗೋಗರೆದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ತನಿಖೆಯನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಪೊಲೀಸರು ಮೇ 18ರಂದು ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶಸ್ತ್ರಧಾರಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ತನಿಖಾ ಸಂಸ್ಥೆಯು ಈಗಾಗಲೇ ಡಿಐಜಿ ಶ್ರೇಣಿಯ ಅಧಿಕಾರಿ ನೇತೃತ್ವದ ತನ್ನ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಈಶಾನ್ಯ ರಾಜ್ಯದಲ್ಲಿ ಇರಿಸಿತ್ತು. ಪ್ರಕರಣದ ತನಿಖೆಗೆ ವಿಧಿವಿಜ್ಞಾನ ತಜ್ಞರಲ್ಲದೆ ಇನ್ನೂ ಕೆಲವು ಮಹಿಳಾ ಅಧಿಕಾರಿಗಳನ್ನು ಸಿಬಿಐ ಕಳುಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೇರವಣಿಗೆ ಮಾಡಿದ ವಿಡಿಯೋ ವೈರಲ್ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಇದು 'ನಾಚಿಕೆಗೇಡಿನ' ಮತ್ತು 'ಸ್ವೀಕಾರಾರ್ಹವಲ್ಲ' ಎಂದಿದ್ದಾರೆ.
ಮಣಿಪುರವು ಇಂಫಾಲ್ ಕಣಿವೆಯಲ್ಲಿ ವಾಸವಾಗಿರುವ ಬಹುಸಂಖ್ಯಾತ ಮೇಟಿ ಸಮುದಾಯ ಮತ್ತು ಬೆಟ್ಟಗಳನ್ನು ಆಕ್ರಮಿಸಿಕೊಂಡಿರುವ ಕುಕಿ ಸಮುದಾಯಗಳ ನಡುವೆ ಮೇ 3 ರಿಂದ ಜನಾಂಗೀಯ ಘರ್ಷಣೆಗೆ ಸಾಕ್ಷಿಯಾಗಿದೆ.ಹಿಂಸಾಚಾರದಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮಣಿಪುರದ ಜನಸಂಖ್ಯೆಯ ಸುಮಾರು ಶೇ 53 ರಷ್ಟಿರುವ ಮೇಟಿ ಸಮುದಾಯವು ಇಂಫಾಲದ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಒಟ್ಟು ಜನಸಂಖ್ಯೆಯ ಶೇ 40ರಷ್ಟಿದ್ದು, ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.