ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಲು ಸುಪ್ರೀಂ ಕೋರ್ಟ್‌ಅನ್ನು ಬಳಸದಿರಿ ಎಂದು ಅರ್ಜಿದಾರರಿಗೆ ಸರ್ವೋಚ್ಛ ನ್ಯಾಯಾಲಯ ಸೋಮವಾರ ಚಾಟಿ ಬೀಸಿದೆ.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಕಾಲಿನ್ ಗೊನ್ಸಾಲ್ವೆಸ್ ಅವರು ವಾದ ಮಂಡಿಸಿದರು.
ಈ ವೇಳೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, “ಮಣಿಪುರ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂಕೋರ್ಟ್‌ಅನ್ನು ಬಳಕೆ ಮಾಡಿಕೊಳ್ಳದಿರಿ” ಎಂದು ಹೇಳಿದರು.
“ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸುಪ್ರೀಂ ಕೋರ್ಟ್ ಗಮನಿಸಬಹುದು. ಹೆಚ್ಚುವರಿಯಾಗಿ ಯಾವುದಾದರೂ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬಹುದು. ಆದರೆ, ಯಾವುದೇ ರಾಜ್ಯದ ಆಡಳಿತವನ್ನು ಸುಪ್ರೀಂಕೋರ್ಟ್ ನೋಡಿಕೊಳ್ಳುವುದಿಲ್ಲ. ಮಣಿಪುರ ಕಾನೂನು ಮತ್ತು ಸುವ್ಯವಸ್ಥೆಯು ಸುಪ್ರೀಂಕೋರ್ಟ್ ಕೈಯಲ್ಲಿಲ್ಲ. ಹಾಗಾಗಿ, ನ್ಯಾಯಾಲಯವನ್ನು ಹಿಂಸಾಚಾರ ಹೆಚ್ಚಾಗಲು ಬಳಸಿಕೊಳ್ಳಬಾರದು” ಎಂದು ತಿಳಿಸಿದರು.
“ನಿಮ್ಮ ಬಳಿ ಸಕಾರಾತ್ಮಕ ವಿಷಯಗಳಿದ್ದರೆ, ಸಮಸ್ಯೆ ಬಗೆಹರಿಸಲು ಸಲಹೆಗಳಿದ್ದರೆ ಮಂಗಳವಾರದೊಳಗಾಗಿ ನಮಗೆ ಹೇಳಿ. ಅದನ್ನು ಪರಿಶೀಲಿಸಿ ಕೇಂದ್ರ ಹಾಗೂ ಮಣಿಪುರ ಸರ್ಕಾರಕ್ಕೆ ಸೂಚನೆಗಳ ನೀಡಲಾಗುವುದು. ಆದರೆ, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವುದು ಬೇಡ” ಎಂದರು.
ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಮಣಿಪುರ ಹಿಂಸಾಚಾರವು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದರ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುವುದು ಬೇಡ” ಎಂದರು.
ಈ ವೇಳೆ ನ್ಯಾಯಪೀಠವು, ರಾಜ್ಯ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಅಥವಾ ವೇತನ ಕಡಿತವನ್ನು ಎದುರಿಸುವಂತೆ ಜೂನ್‌ನಲ್ಲಿ ಹೊರಡಿಸಲಾದ ಸುತ್ತೋಲೆಯ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 11) ಮುಂದೂಡಿತು.