ಪೆರ್ಲ : ಮಣಿಪುರ ರಾಜ್ಯದ್ಯಾಂತ ನಡೆಯುತ್ತಿರು ಹಿಂಸಾಚಾರವನ್ನು ಖಂಡಿಸಿ ಶಾಂತಿ ಸುವ್ಯವಸ್ಥೆ ಆಗ್ರಹಿಸಿ ಕ್ರೈಸ್ತ ಧರ್ಮದ ಪ್ರಮುಖ ಸಂಘಟನೆಯಾದ ಕೆಥೋಲಿಕ್ ಸಭಾದ ನೇತೃತ್ವದಲ್ಲಿ ಭಾನುವಾರ ಜಿಲ್ಲೆಯಾದ್ಯಂತ ಪ್ರತಿಭಟನೆ ಜರಗಿತು. ಇದರ ಅಂಗವಾಗಿ ಮಂಗಳೂರು ಧರ್ಮಪ್ರಾಂತ್ಯಕ್ಕೊಳಪಟ್ಟ ಕಾಸರಗೋಡು ವಲಯದ ಮಣಿಯಂಪಾರೆ ಸಂತ ಲಾರೆನ್ಸರ ಇಗರ್ಜಿ ವತಿಯಿಂದ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ ಮಕ್ಕಳು ಮಹಿಳೆಯರ ಸಹಿತ ನೂರಾರು ಜನರು ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.
ಚರ್ಚ್ ಪರಿಸರದಿಂದ ಧರ್ಮಗುರುಗಳಾದ ಫಾದರ್ ನೆಲ್ಸನ್ ಡಿ ಆಲ್ಮೇಡಾ ಅವರ ನೇತೃತ್ವದಲ್ಲಿ "ಶಾಂತಿ ಯಾತ್ರೆ" ಎಂಬ ಮೌನ ಮೆರವಣಿಗೆಯ ಮೂಲಕ ಆರಂಭವಾದ ಪ್ರತಿಭಟನೆಯನ್ನು ಶೇಣಿ ಶಾಲಾ ಬಸ್ ನಿಲ್ದಾಣ ಬಳಿ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ "ಜಾತ್ಯಾತೀತ ರಾಷ್ಟ್ರದಲ್ಲಿ ಸಂವಿಧಾನತ್ಮಕವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಇದನ್ನು ಉಲ್ಲಂಘಿಸಿ ಮತ ಧರ್ಮ ಆಧಾರದಲ್ಲಿ ಒಡೆದು ಆಳುವ ರಾಜಕೀಯ ಷಡ್ಯಂತ್ರಕ್ಕೆ ಮಣಿಪುರದ ಮುಗ್ದ ಜನತೆ ಬಲಿಯಾಗುತ್ತಿದ್ದಾರೆ. ದೊಂಬಿ, ಗಲಭೆ ಅತ್ಯಾಚಾರದಂತಹ ದಿನ ನಿತ್ಯದ ಘಟನೆಗಳ ವಿರುದ್ಧ ಸರ್ಕಾರಗಳು ಮೌನವಹಿಸಿದ್ದು ಇದರ ವಿರುದ್ಧ ಸಾರ್ವಜನಿಕ ಪ್ರತಿಭಟನೆ ನಡೆಯಬೇಕಾಗಿರುವು ಸಕಾಲಿಕವಾಗಿದೆ" ಎಂದರು.
ಕೆಥೋಲಿಕ್ ಸಭಾದ ಕಾಸರಗೋಡು ವಲಯ ಅಧ್ಯಕ್ಷ ರಾಜು ಜೋನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂಲೀಗ್ ನೇತಾರ ಅಬೂಬಕ್ಕರ್ ಪೆರ್ದನೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಣಿಯಂಪಾರೆ ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಧನರಾಜ್ ಡಿಸೋಜ, ಐಸಿವೈಎಂ ಕೇಂದ್ರಿಯ ಸಮಿತಿ ಉಪಾಧ್ಯಕ್ಷ ಡೆಲ್ವಿನ್ ಡಿಸೋಜ, ಕೆಥೋಲಿಕ್ ಸಭಾ ಮಣಿಯಂಪಾರೆ ಘಟಕಾಧ್ಯಕ್ಷ ಅಮೃತ್ ಡಿಸೋಜ ಬೊಲ್ಕಿನಡ್ಕ, ಐಸಿವೈಎಂ ಮಣಿಯಂಪಾರೆ ಘಟಕಾಧ್ಯಕ್ಷ ಪ್ರೀತಮ್ ಡಿಸೋಜ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.