ನವದೆಹಲಿ: ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಹೊರಡಿಸಿರುವ ಸುಗ್ರೀವಾಜ್ಞೆಗೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸಂಸತ್‌ನಲ್ಲಿ ಕೇಂದ್ರ ಹೊರಡಿಸಿರುವ ಸುಗ್ರೀವಾಜ್ಞೆಗೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾನುವಾರ ಹೇಳಿದ್ದಾರೆ.
ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನವನ್ನು ವಿರೋಧಿಸಲಾಗುವುದು ಎಂದು ವೇಣುಗೋಪಾಲ್ ಹೇಳಿದ್ದಾರೆ.
ವಿರೋಧ ಪಕ್ಷಗಳ ಸರ್ಕಾರಗಳಿರುವ ರಾಜ್ಯಗಳಲ್ಲಿನ ಆಡಳಿತದಲ್ಲಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಕ್ಕೆ ವಿರೋಧ ಇದೆ. ಇದು ಪಕ್ಷದ ಸ್ಪಷ್ಟ ನಿಲುವು. ಹೀಗಾಗಿ ಸಂಸತ್‌ನಲ್ಲಿ ಈ ಸುಗ್ರೀವಾಜ್ಞೆಗೆ ಸಂಬಂಧಿಸಿದ ಮಸೂದೆಯನ್ನು ವಿರೋಧಿಸಲು ಪಕ್ಷ ನಿರ್ಧರಿಸಿದೆ' ಎಂದರು.
ಎಎಪಿ ಸ್ವಾಗತ
ಸಂಸತ್‌ನಲ್ಲಿ ಮಂಡನೆಯಾಗಲಿರುವ ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಹೇಳಿರುವ ಕಾಂಗ್ರೆಸ್‌ನ ನಿಲುವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸ್ವಾಗತಿಸಿದೆ.
ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಸ್ಪಷ್ಟವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ ಹೇಳಿರುವುದು ಸಕಾರಾತ್ಮಕ ಬೆಳವಣಿಗೆ' ಎಂದು ಎಎಪಿ ಸಂಸದ ಹಾಗೂ ವಕ್ತಾರ ರಾಘವ್ ಛಡಾ ಟ್ವೀಟ್ ಮಾಡಿದ್ದಾರೆ.