ಕುಂಬಳೆ: ಇತ್ತೀಚೆಗೆ ನಿಧನರಾದ ಯುವಮೋರ್ಚಾ ಕುಂಬಳೆ ಮಂಡಲ ಉಪಾಧ್ಯಕ್ಷ ರಾಜೇಶ್ ಬಂಬ್ರಾಣ ಸಂಸ್ಮರಣಾ ಸಮಾರಂಭ ಕುಂಬಳೆ ಪೈ ಸಭಾಭವನದಲ್ಲಿ ನಡೆಯಿತು. ಯುವಮೋರ್ಚಾ ಕುಂಬಳೆ ಮಂಡಲ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಸಂಸ್ಮರಣಾ ಮಾತುಗಳನ್ನಾಡಿ, ರಾಜೇಶ್ ಅವರ ಅಕಾಲಿಕ ಸಾವು ಸಂಘ ಪರಿವಾರದ ಸಂಘಟನೆಗಳಿಗೆ ಮಾತ್ರವಲ್ಲ ಸಮಾಜಕ್ಕೂ ಅಪಾರ ನಷ್ಟವನ್ನುಂಟುಮಾಡಿದೆ. ರಾಜೇಶ್ ಅವರ ಸಮಾಜಮುಖಿ ಕೆಲಸಗಳು ಯುವಜನತೆಗೆ ಮಾದರಿಯಾಗಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮಾತನಾಡಿ, ರಾಜೇಶ್ ಸಾವಿನಲ್ಲಿ ನಿಗೂಢತೆಗಳಿದ್ದಲ್ಲಿ ಇದನ್ನು ಪತ್ತೆ ಹಚ್ಚಲು ಪಕ್ಷವು ಮುಂಚೂಣಿಯಲ್ಲಿದ್ದು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಪ್ರಕಾಶ್ ಬಾಬು, ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಯುವಮೋರ್ಚಾ ಜಿಲ್ಲಾಧ್ಯಕ್ಷ ಧನುಂಜಯ ಮಧೂರು, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನೀಲ್ ಅನಂತಪುರ, ಯುವ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್ ಮಾತನಾಡಿದರು. ರಾಜೇಶ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಛಾಯಾಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.