ಹೈದರಾಬಾದ್: ತಮ್ಮನ್ನು ಬಿಜೆಪಿಯ 'ಬಿ ಟೀಂ' ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ತಿರುಗೇಟು ನೀಡಿದೆ.
ನಾವು ಯಾರ ಬಿ ಟೀಂ ಅಲ್ಲ ಎಂದು ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಬಿಆರ್‌ಎಸ್ ಬಡವರ ಎ ಟೀಂ. ಕಾಂಗ್ರೆಸ್‌ಗೆ ಆಡಳಿತರೂಢ ಸರ್ಕಾರವನ್ನು ಎದುರಿಸಲು ಆಗದಿರುವುದರಿಂದ, ಬಿಜೆಪಿಯ ಕಪಿಮುಷ್ಠಿಯಿಂದ ದೇಶವನ್ನು ರಕ್ಷಣೆ ಮಾಡಲು ಹುಟ್ಟಿದ ಪಕ್ಷ ಬಿಆರ್‌ಎಸ್' ಎಂದು ಅವರು ಹೇಳಿದ್ದಾರೆ.
ಅಲ್ಲದೇ ಬಿಆರ್‌ಎಸ್ ವಿರುದ್ಧ ರಾಹುಲ್ ಗಾಂಧಿ ಮಾಡಿದ ಭ್ರಷ್ಟಾಚಾರ ಆರೋಪಕ್ಕೂ ಅವರು ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಸಮನಾರ್ಥಕ ಪದ ಎನ್ನುವಂತೆ ಕಾಂಗ್ರೆಸ್ ಇತ್ತು. ಅದಕ್ಕೆ ಜನ ಅದನ್ನು ಬದಲಾಯಿಸಿದರು. ನಿಮ್ಮ ಪಕ್ಷದ ಹೆಸರೇ ಸ್ಕ್ಯಾಮ್‌ಗ್ರೇಸ್ ಎಂದಾಗಿದೆ' ಎಂದು ಅವರು ಟೀಕಿಸಿದ್ದಾರೆ.
ಕಾಳೇಶ್ವರ ಯೋಜನೆ ವೆಚ್ಚವೇ ₹ 80, 321.57 ಕೋಟಿ. ಹೀಗಿರುವಾಗ ಈ ಯೋಜನೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವುದು ಹಾಸ್ಯಸ್ಪದ ಎಂದು ಅವರು ನುಡಿದಿದ್ದಾರೆ.
'ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರ ಶೇಖರ್ ರಾವ್, ಪ್ರಧಾನಿ ಮೋದಿ ಅಣತಿಯಂತೆ ಕೆಲಸ ಮಾಡುತ್ತಾರೆ. ರಾಜ್ಯದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಬಿಜೆಪಿಯ 'ಬಿ' ಟೀಂ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಖಮ್ಮಮ್‌ನಲ್ಲಿ ನಡೆದ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದರು.
ಬಿಆರ್‌ಎಸ್ ಪಕ್ಷವನ್ನು 'ಬಿಜೆಪಿ ರಿಶ್ತೇದಾರ್ (ಸಂಬಂಧಿಕರು) ಸಮಿತಿ' ಎಂದು ಕರೆದಿದ್ದರು.
'ರಾವ್ ಮತ್ತು ಅವರ ಪಕ್ಷದ ನಾಯಕರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳು ಅವರು ಬಿಜೆಪಿ ಎದುರು ತಲೆಬಾಗುವಂತೆ ಮಾಡಿವೆ' ಎಂದು ಟೀಕಿಸಿದ್ದರು.