ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ಹೇಯ ಕೃತ್ಯದ ಸಂಬಂಧ ಜೂನ್ 21ರಂದು ಸೈಕುಲ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸದ್ಯ ಹರಿದಾಡುತ್ತಿರುವ ವಿಡಿಯೊಗಳು ಕೃತ್ಯಕ್ಕೆ ಪ್ರಮುಖ ಸಾಕ್ಷ್ಯಗಳಾಗಿವೆ.
ಎಫ್‌ಐಆರ್ ಆಧಾರದಲ್ಲಿ ಪಿಟಿಐ ವಿವರವಾದ ವರದಿ ಬರೆದಿದೆ.
ಅತ್ಯಾಚಾರಕ್ಕೆ ಯತ್ನಿಸಿದ್ದ ಉದ್ರಿಕ್ತ ಜನರ ಗುಂಪಿನಿಂದ ತನ್ನ ಸಹೋದರಿಯರನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುವುದಕ್ಕೂ ಮೊದಲು ಈ ಕೃತ್ಯವೆಸಗಲಾಗಿತ್ತು.
'ಸುಮಾರು 900-1000 ಜನರು ರೈಫಲ್ಸ್‌ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಮೇ 4ರಂದು ಮಧ್ಯಾಹ್ನ 3ರ ಹೊತ್ತಿಗೆ ಗ್ರಾಮಕ್ಕೆ ನುಗ್ಗಿದ್ದರು. ಹಣ, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಆಹಾರ ಧಾನ್ಯಗಳು, ಬಟ್ಟೆ ಹೊತ್ತೊಯ್ದಿದ್ದರು. ಲೂಟಿ ಬಳಿಕ ಎಲ್ಲ ಮನೆಗಳಿಗೆ ಬೆಂಕಿ ಹಚ್ಚಿದರು. ಕಾಂಗ್‌ಪೊಕ್ಪಿ ಜಿಲ್ಲೆಯ ಈ ಹಳ್ಳಿಯು, ಸೈಕುಲ್ ಪೊಲೀಸ್ ಠಾಣೆಯಿಂದ 68 ಕಿ.ಮೀ ದೂರದಲ್ಲಿದೆ' ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಗುಂಪು ದಾಳಿಯಿಂದ ಹೆದರಿದ್ದ ಹಳ್ಳಿಯ ಐವರು ಕಾಡಿಗೆ ಓಡಿಹೋಗಿದ್ದರು.
ಮಹಿಳೆಯರನ್ನು ವಿವಸ್ತ್ರಗೊಳಿಸಿ, ಲೈಂಗಿಕ ಕಿರುಕುಳ ನೀಡಿದ ಹೇಯ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ಜುಲೈ 19ರಂದು ಎಲ್ಲೆಡೆ ಹರಿದಾಡಿದ ಒಂದು ದಿನದ ಬಳಿಕ, ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ವಿಚಾರವಾಗಿ ಜೂನ್ 21ರಂದೇ ಸೈಕುಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈತೇಯಿ ಸಮುದಾಯಗಳ ನಡುವೆ ಮೇ 3ರ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದೆ. ಈವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಆರೋಪಿಯ ಮನೆಗೆ ಬೆಂಕಿ
ಬಂಧನಕ್ಕೊಳಗಾಗಿರುವ ನಾಲ್ವರ ಪೈಕಿ ತೌಬಲ್ ಜಿಲ್ಲೆಯ ಪೆಚಿ ಅವಾಂಗ್‌ನಲ್ಲಿ ಇರುವ ಒಬ್ಬ ಆರೋಪಿಯ ಮನೆಗೆ ಉದ್ರಿಕ್ತ ಸ್ಥಳೀಯರು ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.