ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿ ಅಪರಿಚಿತ ಯುವಕನೊಬ್ಬ ಹಲವರಿಂದ ಹಣ ಪೀಕಿಸಿರುವ ಮಾಹಿತಿ ಬಹಿರಂಗೊಂಡಿದೆ. ಸಭ್ಯ ನಾಗರಿಕನಂತೆ ಬೈಕಲ್ಲಿ ಆಗಮಿಸಿ ಆಯಕಟ್ಟಿನ ಪ್ರದೇಶದಲ್ಲಿ ಬಂದು ನಿಲ್ಲುವ ಈತ ಆ ವ್ಯಕ್ತಿಯ ಹೆಸರು ಕೂಗಿ ಕರೆದು ಮಾತನಾಡಿಸುತ್ತಾನೆ. ಜತೆಗೆ ಆಸುಪಾಸಿನ ಕೆಲವು ವ್ಯಕ್ತಿಗಳ ಹೆಸರನ್ನೂ ಹೇಳುತ್ತಾನೆ. ಇನ್ನು ಹಣ ಬಿಡುಗಡೆಯಾಗುವ ಬ್ಯಾಂಕಿನ ಬಗ್ಗೆಯೂ ಮಾತನಾಡಿ, ಅಲ್ಲಿನ ಸಿಬ್ಬಂದಿ ಹೆಸರನ್ನೂ ಹೇಳಿ ತನ್ನ ಮುಂದಿರುವ ವ್ಯಕ್ತಿಯ ವಿಶ್ವಾಸ ಗಳಿಸುತ್ತಾನೆ.
ಮಹಿಳೆಯರು ಹಾಗೂ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಈತ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಚಿಕಿತ್ಸಾ ಫಂಡ್‍ನಿಂದ ತಮಗೆ ಹಣ ಬಂದಿರುವುದಾಗಿಯೂ, ಇದರಲ್ಲಿ ಒಂದುಪಾಲು ಬ್ಯಾಂಕಿಗೆ ತುಂಬಿದ ತಕ್ಷಣ ಚೆಕ್ ತಮ್ಮ ಹೆಸರಿಗೆ ಬಂದು ಸೇರುತ್ತದೆ. ಲಭಿಸುವ ಒಟ್ಟು ಮೊತ್ತದ ಶೇ. 10ರಷ್ಟು ಹಣ ಪಾವತಿಸಬೇಕಾಗುತ್ತದೆ, ತಮ್ಮ ಕೈಯಲ್ಲಿರುವಷು ಹಣ ನೀಡಿದರೆ, ಬಾಕಿ ಹಣ ತಾನು ನೀಡುವುದಾಗಿಯೂ, ಚೆಕ್ ನಗದು ಮಾಡಿದ ನಂತರ ತನಗೆ ನೀಡಿದರೆ ಸಾಕೆಂದೂ ತಿಳಿಸಿ ಅವರಲ್ಲಿ ನಂಬಿಕೆ ಹುಟ್ಟಿಸುತ್ತಾನೆ. ಈ ರೀತಿಯಾಗಿ ಮಹಿಳೆಯರಿಬ್ಬರಿಂದ ಹಣ ದೋಚಿರುವ ಈ ವ್ಯಕ್ತಿ ಶನಿವಾರವೂ ಪೆರ್ಲ ಪೇಟೆಗೆ ಆಗಮಿಸಿ ಬಜಕೂಡ್ಲಿನ ವ್ಯಕ್ತಿಯೊಬ್ಬರ ಪರಿಚಯಮಾಡಿಕೊಂಡು ಪ್ರಧಾನಿ ಮೋದಿ ಚಿಕಿತ್ಸಾ ಮೊತ್ತ ತಮಗೆ ಮಂಜೂರಾಗಿರುತ್ತದೆ. ಏಳು ಸಾವಿರ ರೂ. ನೀಡಿದಲ್ಲಿ
ಈ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ. ಮೊದಲು ನಾಲ್ಕು ಸಾವಿರ ನೀಡುವಂತೆ ದುಂಬಾಲು ಬಿದ್ದಿದ್ದಾನೆ. ವಂಚಕನ ಮಾತು ನಂಬಿದ ವ್ಯಕ್ತಿ ಸ್ಥಳದಲ್ಲಿದ್ದ ತನ್ನ ಪರಿಚಯಸ್ಥರಲ್ಲಿ ನಾಲ್ಕು ಸಾವಿರ ರೂ. ಸಾಲ ಕೇಳಿದ್ದು, ತಕ್ಷಣಕ್ಕೆ ಅವರಿಗೆ ಕೊಡಲಾಗದ ಹಿನ್ನೆಲೆಯಲ್ಲಿ ಹಣ ತರಲು ಆಚೀಚೆ ಅಲೆದಾಡಿದ್ದಾರೆ. ಈ ಹಿಂದೆ ಇದೇ ವ್ಯಕ್ತಿ ಕೆಲವರನ್ನು ವಂಚಿಸಿರುವ ಬಗ್ಗೆ ಮಾಹಿತಿ ಲಭಿಸಿ ಹಣ ನೀಡುವುದರಿಂದ ವಿಮುಖರಾಗಿದ್ದಾರೆ.
ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ. ದೂರು ದಾಖಲಾದಲ್ಲಿ ಈ ಬಗ್ಗೆ ಪರಿಗಣಿಸಲಾಗುವುದು ಎಂದು ಬದಿಯಡ್ಕ ಠಾಣೆ ಎಸ್.ಐ ವಿನೋದ್ ಕುಮಾರ್ ತಿಳಿಸಿದ್ದಾರೆ.