ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA' ಎಂದು ಕರೆದುಕೊಂಡಿವೆ.
INDIA ಎಂದರೆ I-Indian N-National D-Developmental I-Inclusive A-Alliance (ಇಂಡಿಯನ್ ನ್ಯಾಷನಲ್ ಡೆವೆಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್) ಎಂದರ್ಥ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ 26 ಪಕ್ಷಗಳು ಭಾಗಿಯಾಗಿದ್ದು, ಈ ಸಭೆಯಲ್ಲಿ 'INDIA' ಹೆಸರನ್ನು ಅಂತಿಮಗೊಳಿಸಲಾಗಿದೆ.
ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ INDIA ಹೆಸರು ಘೋಷಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿ ಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ಹೆಸರಿಡಲಾಗಿದೆ. ಇದಕ್ಕೆ ಎಲ್ಲ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮದು ಬಿಜೆಪಿ ಸಿದ್ಧಾಂತದ ವಿರುದ್ಧದ ಹೋರಾಟ ಎಂದು ಗುಡುಗಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಸಭೆಗೆ ಹಾಜರಾಗಿದ್ದರು.
ಚೆಕ್ ದೇ ಇಂಡಿಯಾ (ಮುನ್ನುಗ್ಗು ಭಾರತ) ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಯಾನ್ ಟ್ವೀಟ್ ಮಾಡಿದ್ದಾರೆ.