ಬೆಂಗಳೂರು: ದೇಶದಲ್ಲಿ ಮುಂಗಾರುಮಳೆ ಬಿರುಸುಗೊಳ್ಳುತ್ತಿದ್ದಂತೆಯೇ ಟೊಮೊಟೋ ದರ ಮತ್ತಷ್ಟು ಗಗನಕ್ಕೇರಿದ್ದು, ಪ್ರತೀ ಕೆಜಿಗೆ 155ರೂಗೆ ಏರಿಕೆಯಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಉತ್ಪಾದನಾ ಪ್ರದೇಶದಲ್ಲಿ ಮಳೆಯಿಂದಾಗಿ ಉಂಟಾದ ಪೂರೈಕೆ ಅಡಚಣೆಯಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿಲ್ಲರೆ ಟೊಮೆಟೊ ಬೆಲೆ ಕೆಜಿಗೆ 155 ರೂ.ಗೆ ಏರಿದೆ. ಮಹಾನಗರಗಳಲ್ಲಿ, ಚಿಲ್ಲರೆ ಟೊಮೆಟೊ ಬೆಲೆಗಳು ಪ್ರತಿ ಕೆಜಿಗೆ ರೂ 58-148 ರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿವೆ.
ಕೋಲ್ಕತ್ತಾದಲ್ಲಿ ಟೊಮೋಟೋ ದರ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ ಕೆಜಿಗೆ ರೂ 148ರೂಗೆ ಏರಿಕೆಯಾಗಿದೆ. ಅಂತೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಕೆಜಿಗೆ ರೂ 58 ರಷ್ಟಿದೆ. ದೆಹಲಿ ಮತ್ತು ಚೆನ್ನೈನಲ್ಲಿ, ಬೆಲೆಗಳು ಕ್ರಮವಾಗಿ ಕೆಜಿಗೆ 110 ಮತ್ತು ಕೆಜಿಗೆ 117 ರೂಗಳಾಗಿವೆ.
ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಅಂಕಿಅಂಶಗಳ ಪ್ರಕಾರ, ಸರಾಸರಿ ಅಖಿಲ ಭಾರತ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 83.29 ರೂ.ಗಳಾಗಿದ್ದು, ಪ್ರತಿ ಕೆಜಿಗೆ ಮಾದರಿ ಬೆಲೆ 100 ರೂಗಳಾಗಿವೆ ಎಂದು ತಿಳಿದುಬಂದಿದೆ. ಅಂತೆಯೇ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪ್ರತಿ ಕೆಜಿಗೆ ಅತಿ ಹೆಚ್ಚು ಅಂದರೆ 155 ರೂ. ಟೊಮೊಟೋ ಮಾರಾಟವಾಗುತ್ತಿದೆ.
ಏತನ್ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಸ್ಥಳೀಯ ಮಾರಾಟಗಾರರು ಟೊಮೆಟೊವನ್ನು ಗುಣಮಟ್ಟ ಮತ್ತು ಸ್ಥಳೀಯತೆಗೆ ಅನುಗುಣವಾಗಿ ಕೆಜಿಗೆ 120-140 ರೂಪಾಯಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪಶ್ಚಿಮ ವಿಹಾರ್‌ನಲ್ಲಿರುವ ಸ್ಥಳೀಯ ಮಾರಾಟಗಾರ ಜ್ಯೋತಿಶ್ ಕುಮಾರ್ ಝಾ ಅವರು, 'ನಾವು ಉತ್ತಮ ಗುಣಮಟ್ಟದ ಟೊಮೆಟೊವನ್ನು ಆಜಾದ್‌ಪುರ ಸಗಟು ಮಾರುಕಟ್ಟೆಯಿಂದ ಕೆಜಿಗೆ 120 ರೂ.ಗೆ ಖರೀದಿಸಿದ್ದೇವೆ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಕೆಜಿಗೆ 140 ರೂ.ಗೆ ಮಾರಾಟ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಕಟಾವು ಮತ್ತು ಸಾಗಾಣಿಕೆ ಮೇಲೆ ಪರಿಣಾಮ ಬೀರಿರುವ ಉತ್ಪಾದನಾ ರಾಜ್ಯಗಳಿಂದ ಕಳೆದ ಎರಡು ವಾರಗಳಲ್ಲಿ ಪೂರೈಕೆ ಸ್ಥಗಿತಗೊಂಡಿದೆ. ಟೊಮೇಟೊ ಬೆಲೆಯಲ್ಲಿನ ಪ್ರಸ್ತುತ ಏರಿಕೆಯು ಕಾಲೋಚಿತ ವಿದ್ಯಮಾನವಾಗಿದೆ ಎಂದು ಸರ್ಕಾರವು ಸಮರ್ಥಿಸಿಕೊಂಡಿದ್ದು ಈ ಸಮಯದಲ್ಲಿ, ಬೆಲೆಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಮುಂದಿನ 15 ದಿನಗಳಲ್ಲಿ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ ಮತ್ತು ಒಂದು ತಿಂಗಳಲ್ಲಿ ಸಾಮಾನ್ಯವಾಗುತ್ತದೆ ಎಂದು ಹೇಳಿದೆ.