ದೆಹಲಿ: ಆಧುನಿಕ ಕಾಲದಲ್ಲಿ ಜನರು ಕಾರು ಖರೀದಿಸುವಾಗ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ವಾಹನಗಳಿಗೆ ಅತಿ ಹೆಚ್ಚು ಆದ್ಯತೆ ನೀಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೆಚ್ಚೆಚ್ಚು ಸುರಕ್ಷಿತ ಮಾನದಂಡಗಳನ್ನು ನೀಡತ್ತಿವೆ.
ಈ ನಿಯಮಗಳು 2023ರ ಅಕ್ಟೋಬರ್ 01 ರಿಂದ ಜಾರಿಗೆ ಬರಲಿದ್ದು, ಇವುಗಳನ್ನು ವಿಶೇಷವಾಗಿ ಭಾರತಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು 'ಭಾರತ್ ಎನ್‌ಸಿಎಪಿ (new car assesement program)' ಎಂದು ಕರೆಯಲಾಗಿದ್ದು, ನಮ್ಮ ದೇಶದಲ್ಲಿ ತಯಾರಾಗುವ ವಾಹನಗಳು ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ನಡೆಸಲಾಗುವ ಕ್ರ್ಯಾಶ್ ಟೆಸ್ಟ್ ಆಗಿದೆ. ಈಗಾಗಲೇ ಮಾರುತಿ, ಮಹೀಂದ್ರಾ, ಟೊಯೋಟಾ, ಸ್ಕೋಡಾ, ಕಿಯಾ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ದೇಶದ ಪ್ರಮುಖ ತಯಾರಕರು ಭಾರತ್ ಎನ್‌ಸಿಎಪಿಯನ್ನು ಸ್ವಾಗತಿಸಿವೆ.
ಭಾರತ್ NCAP:
ಭಾರತ್ NCAP ಎಂಬುದು ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮವಾಗಿದ್ದು, ಇದು ಭಾರತದಲ್ಲಿ ವಾಹನಗಳನ್ನು ಹೆಚ್ಚು ಸದೃಢವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಈ ವರ್ಷ ಅಕ್ಟೋಬರ್ 1ರಿಂದ ಭಾರತವು ತನ್ನದೇಯಾದ ಸ್ವಂತ ಕಾರ್ ಕ್ರ್ಯಾಷ್ ಸೇಫ್ಟಿ ಸ್ಟಾರ್ ಸಿಸ್ಟಮ್ ವ್ಯವಸ್ಥೆ ಹೊಂದಿರಲಿದೆ. ನಮ್ಮ ದೇಶದಲ್ಲಿ ತಯಾರಾಗುವ ವಾಹನಗಳು ಮಾತ್ರವಲ್ಲದೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಾಹನಗಳು ಕೂಡ ಭಾರತದ NCAP ಪ್ರಮಾಣಪತ್ರವನ್ನು ಹೊಂದಿರಬೇಕು.
ಭಾರತ NCAP ಕ್ರ್ಯಾಶ್ ಟೆಸ್ಟ್‌ನ ನಿಯಮಗಳನ್ನು ಸರ್ಕಾರವು ಈಗಾಗಲೇ ನಿಗದಿಪಡಿಸಿದೆ. ಅದರಂತೆ, ವಾಹನ ವಿನ್ಯಾಸ, ವಯಸ್ಕ ಮಕ್ಕಳ ಸುರಕ್ಷತೆ, ಸುರಕ್ಷತಾ ನೆರವು ತಂತ್ರಜ್ಞಾನವನ್ನು ಹೊಂದಿರಬೇಕು. ಈಗಾಗಲೇ ಜಾರಿಯಲ್ಲಿರುವ Global NCAP ಮತ್ತು Euro NCAP ಕೂಡ ಈ ನಿಯಮಗಳನ್ನು ಅನುಸರಿಸುತ್ತವೆ. ಈ ನಿಯಮದ ಪ್ರಕಾರ, ಭಾರತದಲ್ಲಿ ತಯಾರಾಗುವ ಕಾರುಗಳು ಸುರಕ್ಷತಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕ್ರ್ಯಾಶ್ ಮತ್ತು ಸುರಕ್ಷತೆ ಪರೀಕ್ಷೆಯ ರೇಟಿಂಗ್‌ಗಳು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AIS)-197 ಗೆ ಅನುಗುಣವಾಗಿರುತ್ತವೆ.
NCAPಯು ಕಾರಿನ ಪಾದಚಾರಿ-ಸ್ನೇಹಿ ವಿನ್ಯಾಸದ ಮೌಲ್ಯಮಾಪನ, ವಾಹನದ ರಚನಾತ್ಮಕ ಸುರಕ್ಷತೆ, ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ಸಹಾಯ ತಂತ್ರಜ್ಞಾನದ ಜತೆಗೆ ವಾಹನ ಸವಾರರ ಸುರಕ್ಷತೆಯನ್ನು ಒಳಗೊಂಡಿರುವುದರ ಜತೆಗೆ ಇನ್ನು ಹಲವಾರು ಸುರಕ್ಷತಾ ಮಾನದಂಡಗಳನ್ನು ಒಳಗೊಂಡಿದೆ.
ಭಾರತ್ NCAP ಸ್ವಯಂಪ್ರೇರಿತ ಕಾರ್ಯಕ್ರಮವಾಗಿದ್ದರೂ ಸಹ, ಮೂಲ ಸಲಕರಣೆ ತಯಾರಕರು ಮಾದರಿ ವಾಹನಗಳನ್ನು ಪರೀಕ್ಷೆಗಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಈ ಸುರಕ್ಷತಾ ಮಾನದಂಡವು ಸ್ವದೇಶಿ ವಾಹನ ತಯಾರಕರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅವರು ತಮ್ಮ ಕಾರ ಪರೀಕ್ಷೆ ಮತ್ತು ಅವುಗಳ ಶ್ರೇಣೀಕರಣಕ್ಕಾಗಿ ಜಾಗತಿಕ NCAPಗೆ ಕಳುಹಿಸಬೇಕಾಗಿಲ್ಲ, ಇದರಿಂದಾಗಿ ಅವರ ವೆಚ್ಚಗಳು ಕಡಿಮೆಯಾಗು ಸಾಧ್ಯತೆಯಿದೆ.