ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ RTI ಅಡಿ ಕೇಳಲಾದ ಮಾಹಿತಿಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ. ನಂತರ ಆ ದಾಖಲೆಗಳನ್ನು ಎಸ್ ಯುವಿ ಕಾರಿನಲ್ಲಿ ಮನೆಗೆ ಕೊಂಡೊಯ್ದಿದಿದ್ದಾರೆ. ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣಕ್ಕೆ ಪ್ರತಿ ಪುಟಕ್ಕೆ ನಿಗದಿತ 2 ರೂ. ಅನ್ನು ಧರ್ಮೇಂದ್ರ ಶುಕ್ಲಾ ಅವರು ಪಾವತಿಸಿಲ್ಲ.
ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್‌ಗಳು ಮತ್ತು ಬಿಲ್ ಪಾವತಿಗಳ ವಿವರಗಳನ್ನು ಕೋರಿ ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಆರ್ ಟಿಐ ಅರ್ಜಿ ಹಾಕಿದ್ದಾಗಿ ಶುಕ್ಲಾ ಶನಿವಾರ ಹೇಳಿದರು.
ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣ, ಮೊದಲ ಮೇಲ್ಮನವಿ ಅಧಿಕಾರಿ ಡಾ. ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ ಅವರು ಮನವಿ ಸ್ವೀಕರಿಸಿದಲ್ಲದ್ದೇ, ಉಚಿತವಾಗಿ ಮಾಹಿತಿ ನೀಡುವಂತೆ ಸೂಚಿಸಿದರು. ನಂತರ ತಮ್ಮ ಕಾರಿನ ಡ್ರೈವರ್ ಸೀಟು ಹೊರತುಪಡಿಸಿ ಉಳಿದೆಲ್ಲಾ ಕಡೆ ದಾಖಲೆಗಳೇ ತುಂಬಿತು ಎಂದು ಅವರು ತಿಳಿಸಿದರು.
ಈ ಕುರಿತು ಡಾ.ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ, ಸಕಾಲದಲ್ಲಿ ಮಾಹಿತಿ ನೀಡದ ಕಾರಣ ರಾಜ್ಯದ ಬೊಕ್ಕಸಕ್ಕೆ 80,000 ರೂಪಾಯಿ ನಷ್ಟ ಮಾಡಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ಸೂಚಿಸಿರುವುದಾಗಿ ಹೇಳಿದ್ದಾರೆ.