ಕಾಸರಗೋಡು: ಕೇರಳದ ರಾಜಧಾನಿಯನ್ನು ತಿರುವನಂತಪುರದಿಂದ ಬಂದರು ನಗರಿ ಕೊಚ್ಚಿ(ಎರ್ನಾಕುಳಂ)ಗೆ ಸ್ಥಳಾಂತರಿಸುವ ಬಗ್ಗೆ ಎರ್ನಾಕುಳಂ ಶಾಸಕ, ಕಾಂಗ್ರೆಸ್ ಮುಖಂಡ ಹೈಬಿ ಈಡನ್ ಲೋಕಸಭೆಯಲ್ಲಿ ಮಂಡಿಸಿರುವ ಖಾಸಗಿ ಬಿಲ್ ಬಗ್ಗೆ ವ್ಯಾಪಕ ಚರ್ಚೆ ಆರಂಭಗೊಂಡಿದೆ. ಹೈಬಿ ಈಡನ್ ಅವರ ಆಗ್ರಹ ಈಡೇರಿದಲ್ಲಿ ಕಾಸರಗೋಡಿನ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ಸುಮಾರು 570ಕಿ.ಮೀ ಅಂತರವಿದ್ದು, ಎರ್ನಾಕುಳಂಗೆ ರಾಜಧಾನಿ ಸ್ಥಳಾಂತರಗೊಂಡಲ್ಲಿ 200ಕಿ.ಮೀ ವರೆಗೆ ಲಾಭವಾಗಲಿದೆ.
ತಿರುವನಂತಪುರದಿಂದ ಎರ್ನಾಕುಳಂಗೆ ರಾಜಧಾನಿ ಸ್ಥಳಾಂತರಗೊಂಡಲ್ಲಿ ಕಾಸರಗೋಡು, ಕಣ್ಣೂರಿನ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ. ಪ್ರಸಕ್ತ ಕಾಸರಗೋಡಿನ ಜನತೆಗೆ ರಾಜಧಾನಿ ತಿರುವನಂತಪುರಕ್ಕೆ ತೆರಳಬೇಕಾದರೆ 12ರಿಂದ 14ತಾಸುಗಳ ಕಾಲ ರೈಲು ಪ್ರಯಾಣ ನಡೆಸಬೇಕು. ಪ್ರತಿದಿನ ಎಂಬಂತೆ ತಿರುವನಂತಪುರದ ಸೆಕ್ರೆಟೇರಿಯೆಟ್‍ಗೆ ಕಾಸರಗೋಡಿನಿಂದ ನೂರಾರು ಮಂದಿ ತೆರಳುತ್ತಿದ್ದಾರೆ. ರಾಜ್ಯ ಹೈಕೋರ್ಟು ಈಗಾಗಲೇ ಕೊಚ್ಚಿಯಲ್ಲಿ ಕಾರ್ಯಾಚರಿಸುತ್ತಿರುವುದರಿಂದ ರಾಜಧಾನಿಯನ್ನೂ ಕೊಚ್ಚಿಗೆ ಸ್ಥಳಾಂತರಿಸುವ ಬಗ್ಗೆ ಮಲಬಾರ್ ಪ್ರದೇಶದ ಜನತೆಯಲ್ಲಿ ಬಹುತೇಕ ಒಮ್ಮತದ ಅಭಿಪ್ರಾಯವಿದೆ.
ಲೋಕಸಭೆಯಲ್ಲಿ ಖಾಸಗಿ ಬಿಲ್ ಸಲ್ಲಿಸುತ್ತಿದ್ದಂತೆ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಲೋಕಸಭೆಯಲ್ಲಿ ಖಾಸಗಿ ಬಿಲ್ ಮಂಡಿಸುವ ಮುನ್ನ ಹೈಕಮಾಂಡ್ ಅಭಿಪ್ರಾಯ ಕೇಳಬೇಕಾಗಿತ್ತು ಎಂಬುದಾಗಿ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವಯಕ್ತಪಡಿಸಿದ್ದಾರೆ. ಸಂಸದ ಹೈಬಿ ಈಡನ್ ಅವರ ಖಾಸಗಿ ಬಿಲ್ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.