ರಾಜ್ಪಿಪ್ಲಾ: 2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರೊಬ್ಬರು ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಪಕ್ಷದ ತಾತ್ವಿಕ ಬೆಂಬಲವನ್ನು ಪ್ರತಿಭಟಿಸಿ ಎಎಪಿ ತೊರೆದಿದ್ದಾರೆ.
ಎಎಪಿಯ ರಾಷ್ಟ್ರೀಯ ಸಂಯೋಜಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಪ್ರಫುಲ್ಲ ವಾಸವ ಅವರು ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಮೇಲಿನ ದಾಳಿ ಎಂದು ಹೇಳಿದ್ದಾರೆ.
2022ರ ವಿಧಾನಸಭಾ ಚುನಾವಣೆಯಲ್ಲಿ ನರ್ಮದಾ ಜಿಲ್ಲೆಯ ನಂದೋದ್ (ಎಸ್‌ಟಿ) ಕ್ಷೇತ್ರದಿಂದ ಸ್ಪರ್ಧಿಸಿದ್ದ ವಾಸವ ಅವರು ತಮ್ಮ ರಾಜೀನಾಮೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುವಾಗ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಮಾತನಾಡುವಂತಿಲ್ಲ ಎಂದು ಹೇಳಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಆದಿವಾಸಿಗಳು ಅನುಭವಿಸುತ್ತಿರುವ ಎಲ್ಲಾ ಸವಲತ್ತುಗಳನ್ನು ಕೊನೆಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಮಣಿಪುರದಲ್ಲಿ ಕೇಂದ್ರವು 'ಆದಿವಾಸಿಗಳನ್ನು' ಕೊಂದಿದೆ ಎಂದು ವಾಸವ ಆರೋಪಿಸಿದರು . ಮೂಲಭೂತವಾದ ಮತ್ತು ದ್ವೇಷದ ರಾಜಕೀಯವನ್ನು ವಿರೋಧಿಸಲು ಎಎಪಿಗೆ ಕೇಳಿಕೊಂಡರು. ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ವಾಸವ, 'ಏಕರೂಪ ನಾಗರಿಕ ಸಂಹಿತೆಯು ಬುಡಕಟ್ಟು, ಪರಿಶಿಷ್ಟ ಜಾತಿ, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳು, ಜೀವನಶೈಲಿ ಮತ್ತು ಸಾಮಾಜಿಕ ರಚನೆಯ ಮೇಲೆ ಪರಿಣಾಮ ಬೀರುತ್ತದೆ' ಎಂದು ಹೇಳಿದ್ದಾರೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ರ್ಯಾಲಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಪ್ರಸ್ತಾಪಿಸಿದ ನಂತರ, ಎಎಪಿ ತನ್ನ ತಾತ್ವಿಕ ಬೆಂಬಲವನ್ನು ನೀಡಿತು. ಪಕ್ಷದ ನಾಯಕ ಸಂದೀಪ್ ಪಾಠಕ್ ಅದನ್ನು ಎಲ್ಲರ ಒಪ್ಪಿಗೆಯೊಂದಿಗೆ ತರಬೇಕು ಎಂದು ಹೇಳಿದರು. ಎಎಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಪಾಠಕ್ ಇತ್ತೀಚೆಗೆ, "ಎಎಪಿ ತಾತ್ವಿಕವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತದೆ" ಎಂದು ಹೇಳಿದರು.