ಹೈದರಾಬಾದ್: ದೇವಸ್ಥಾನಕ್ಕೆ ಬಂದಿದ್ದ ಭಕ್ತನೊಬ್ಬ 100 ಕೋಟಿ ರೂ. ಮೊತ್ತ ನಮೂದಿಸಿದ್ದ ಚೆಕ್ ದೇಣಿಗೆಯಾಗಿ ನೀಡಿದ್ದಾನೆ. ಇದುವರೆಗೆ ಯಾರೂ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡದ್ದರಿಂದ ಅಚ್ಚರಿಗೊಂಡ ದೇವಸ್ಥಾನದ ಆಡಳಿತ ಮಂಡಳಿಗೆ, ಆ ಚೆಕ್ ನಗದೀಕರಿಸಿಕೊಳ್ಳಲು ಹೋಗಿದ್ದಾಗ ಅದಕ್ಕಿಂತಲೂ ದೊಡ್ಡ ಅಚ್ಚರಿ ಉಂಟಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂ ಎಂಬಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಈ ಪ್ರಕರಣ ನಡೆದಿದೆ. ಆರಂಭದಲ್ಲಿ ಈತ ಚೆಕ್ನಲ್ಲಿ 10 ಎಂಬುದನ್ನಷ್ಟೇ ಬರೆದಿದ್ದು, ಬಳಿಕ ಸೊನ್ನೆಗಳನ್ನು ಸೇರಿಸುತ್ತ ಹೋಗಿದ್ದು, ನೂರು ಕೋಟಿ ರೂ. ಎಂದು ನಮೂದಿಸಿದ್ದಾನೆ. ಹೀಗೆ ಭರ್ಜರಿ ಮೊತ್ತದ ದೇಣಿಗೆಯ ಚೆಕ್ ನೋಡಿ ಆಡಳಿತ ಸಿಬ್ಬಂದಿ ಅಚ್ಚರಿಗೊಂಡಿದ್ದರು.
ಆದರೆ ದೇವಸ್ಥಾನದವರು ಚೆಕ್ ನಗದೀಕರಿಸಿಕೊಳ್ಳಲು ಬ್ಯಾಂಕ್ಗೆ ಹೋಗಿದ್ದಾಗ ಅವರಿಗೆ ಅದಕ್ಕಿಂತ ದೊಡ್ಡ ಅಚ್ಚರಿ ಕಾದಿತ್ತು. ನೂರು ಕೋಟಿ ರೂ. ಮೊತ್ತದ ಚೆಕ್ ನೀಡಿದ್ದ ಆತನ ಖಾತೆಯಲ್ಲಿ ಇದ್ದಿದ್ದು ಬರೀ 17 ರೂಪಾಯಿ. ಆತ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಗಿದ್ದಲ್ಲಿ ಆತನ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ದೇವಸ್ಥಾನದವರು ತಿಳಿಸಿದ್ದಾರೆ.