ಕೌಲಾಲಂಪುರ್: ಮಲೇಷ್ಯಾದ ಸೆಂಟ್ರಲ್ ಸೆಲಂಗೊರ್ ರಾಜ್ಯದಲ್ಲಿ ಲಘು ವಿಮಾನವೊಂದು ಗುರುವಾರ ರಸ್ತೆಯಲ್ಲೇ ಪತನಗೊಂಡಿದ್ದು, ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಂಟು ಜನ ಹಾಗೂ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
"ಸದ್ಯಕ್ಕೆ, ವಿಮಾನ ದುರಂತದಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆಂದು ನಾನು ಹೇಳಬಲ್ಲೆ. ಇಬ್ಬರು ವಾಹನ ಚಾಲಕರು - ಕಾರಿನಲ್ಲಿದ್ದ ಒಬ್ಬರು ಮತ್ತು ಮೋಟಾರ್ ಸೈಕಲ್‌ನಲ್ಲಿದ್ದ ಒಬ್ಬರು ಹಾಗೂ ವಿಮಾನದಲ್ಲಿದ್ದ ಎಂಟು ಮಂದಿ ಸಹ ಸಾವನ್ನಪ್ಪಿದ್ದಾರೆ" ಎಂದು ಮೊಹಮದ್ ಇಕ್ಬಾಲ್ ಇಬ್ರಾಹಿಂ ಅವರು ಹೇಳಿದ್ದಾರೆ.
ಕೇಂದ್ರ ಪಹಾಂಗ್ ರಾಜ್ಯದ ವಸತಿ ಮತ್ತು ಪರಿಸರ ಉಸ್ತುವಾರಿ, ರಾಜ್ಯ ಅಸೆಂಬ್ಲಿ ಸದಸ್ಯ ಜೊಹರಿ ಹರುನ್ ಅವರು ಸಹ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತನಗೊಂಡ ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಇದ್ದರು. ಆದರೆ ಯಾವುದೇ ಸಾವುನೋವುಗಳ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಮಲೇಷ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನವು ಉತ್ತರದ ರೆಸಾರ್ಟ್ ದ್ವೀಪವಾದ ಲಂಕಾವಿಯಿಂದ ಹೊರಟು ರಾಜಧಾನಿ ಕೌಲಾಲಂಪುರ್‌ನ ಪಶ್ಚಿಮದಲ್ಲಿರುವ ಸುಲ್ತಾನ್ ಅಬ್ದುಲ್ ಅಜೀಜ್ ಶಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥ ನೊರಾಜ್‌ಮಾನ್ ಮಹಮೂದ್ ಅವರು ಹೇಳಿದ್ದಾರೆ.