ನವದೆಹಲಿ: ರಾಜ್ಯಸಭೆಯ ಶೇ.12 ರಷ್ಟು ಹಾಲಿ ಸಂಸದರು ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಅತಿ ಹೆಚ್ಚು ಶ್ರೀಮಂತ ರಾಜ್ಯಸಭಾ ಸದಸ್ಯರನ್ನು ಹೊಂದಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಒಟ್ಟು 233 ರಾಜ್ಯಸಭಾ ಸಂಸದರ ಪೈಕಿ 225 ಸದಸ್ಯರ ಅಪರಾಧ, ಹಣಕಾಸು ಮತ್ತು ಇತರ ವಿವರಗಳನ್ನು ವಿಶ್ಲೇಷಿಸಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ.ವರದಿಯ ಪ್ರಕಾರ, ಆಂಧ್ರಪ್ರದೇಶದ 11 ಸಂಸದರ ಪೈಕಿ ಐವರು(ಶೇ. 45), ತೆಲಂಗಾಣದ ಏಳು ಸಂಸದರಲ್ಲಿ ಮೂವರು(ಶೇ. 43), ಮಹಾರಾಷ್ಟ್ರದ 19 ಸಂಸದರ ಪೈಕಿ ಮೂವರು(ಶೇ. 16), ದೆಹಲಿಯ ಮೂವರು ಸಂಸದರಲ್ಲಿ ಒಬ್ಬರು (ಶೇ. 33), ಪಂಜಾಬ್‌ನ ಏಳು ಸಂಸದರಲ್ಲಿ ಇಬ್ಬರು(ಶೇ 29), ಹರಿಯಾಣದ ಐದು ಸಂಸದರಲ್ಲಿ ಒಬ್ಬರು(ಶೇ 20) ಮತ್ತು ಮಧ್ಯಪ್ರದೇಶದ 11 ಸಂಸದರಲ್ಲಿ ಇಬ್ಬರು(ಶೇ 18) 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ತೆಲಂಗಾಣದಿಂದ ಏಳು ಸಂಸದರ ಒಟ್ಟು ಆಸ್ತಿ ಮೌಲ್ಯ 5,596 ಕೋಟಿ ರೂ. ಆಗಿದ್ದು, ಆಂಧ್ರಪ್ರದೇಶದ 11 ಸಂಸದರ ಒಟ್ಟು ಆಸ್ತಿ 3,823 ಕೋಟಿ ರೂ. ಮತ್ತು ಉತ್ತರ ಪ್ರದೇಶದ 30 ಸಂಸದರ ಒಟ್ಟು ಆಸ್ತಿ ಮೌಲ್ಯ 1,941 ಕೋಟಿ ರೂ. ಎಂದು ವರದಿ ವಿಶ್ಲೇಷಿಸಿದೆ.
225 ರಾಜ್ಯಸಭೆಯ ಹಾಲಿ ಸಂಸದರ ಪೈಕಿ 75 ಸದಸ್ಯರು(ಶೇ.33) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಸುಮಾರು 41 (ಶೇ. 18) ರಾಜ್ಯಸಭೆಯ ಹಾಲಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ ಮತ್ತು ಇಬ್ಬರು ಸದಸ್ಯರು ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.