ನವದೆಹಲಿ: ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) 1,365 ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ (ಐಪಿಎಸ್) 703 ಹುದ್ದೆಗಳು ಖಾಲಿ ಇವೆ ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಗಿದೆ.
ಇವುಗಳಲ್ಲದೆ, ಭಾರತೀಯ ಅರಣ್ಯ ಸೇವೆಯಲ್ಲಿ (ಐಎಫ್‌ಎಸ್) 1,042 ಮತ್ತು ಭಾರತೀಯ ಕಂದಾಯ ಸೇವೆಯಲ್ಲಿ (ಐಆರ್‌ಎಸ್) 301 ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
'ಖಾಲಿ ಹುದ್ದೆಗಳು ಉಂಟಾಗುವುದು ಮತ್ತು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ' ಎಂದರು.
ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಐಆರ್‌ಎಸ್ ಸೇರಿದಂತೆ ನಾಗರಿಕ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಆಧಾರದ ಮೇಲೆ ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರತಿ ವರ್ಷ ನಾಗರಿಕ ಸೇವಾ ಪರೀಕ್ಷೆಗಳನ್ನು (ಸಿಎಸ್‌ಇ) ನಡೆಸುತ್ತದೆ ಎಂದು ಅವರು ಹೇಳಿದರು.
ಐಎಎಸ್ ಮತ್ತು ಐಪಿಎಸ್ ಬಡ್ತಿ ಕೋಟಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ಎಲ್ಲಾ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೇಂದ್ರ ಲೋಕಸೇವಾ ಆಯೋಗವು ಆಯ್ಕೆ ಸಮಿತಿ ಸಭೆಗಳನ್ನು ನಡೆಸುತ್ತದೆ ಎಂದು ಸಚಿವರು ಹೇಳಿದರು.
2022ರಲ್ಲಿ ನಾಗರಿಕ ಸೇವಾ ಪರೀಕ್ಷೆ ಮೂಲಕ ಐಎಎಸ್ ಅಧಿಕಾರಿಗಳ ವಾರ್ಷಿಕ ಭರ್ತಿಯನ್ನು ಸರ್ಕಾರ 180ಕ್ಕೆ ಹೆಚ್ಚಿಸಿದೆ. 2020ರಿಂದ ಐಪಿಎಸ್ ಅಧಿಕಾರಿಗಳ ಭರ್ತಿಯನ್ನು 200ಕ್ಕೆ, 2022ರಿಂದ ಐಎಫ್ಎಸ್‌ನ ಭರ್ತಿಯನ್ನು 50ಕ್ಕೆ ಹೆಚ್ಚಿಸಿದೆ. 2023ರಲ್ಲಿ ಭರ್ತಿ ಮಾಡಲು ಕಂದಾಯ ಇಲಾಖೆ 301 ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿದೆ ಎಂದು ಸಿಂಗ್ ಹೇಳಿದರು.