ಕಾಸರಗೋಡು: ಸ್ಟೂಡೆಂಟ್ ಪೊಲೀಸ್ ಕೆಡೆಟ್(ಎಸ್‍ಪಿಸಿ) ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡು 14ವರ್ಷ ಪೂರೈಸಿದ್ದು, ವಾರ್ಷಿಕ ಸಮಾರಂಭ ಜಿಲ್ಲೆಯಲ್ಲಿ ಜರುಗಿತು. ನಾಯಮರ್‍ಮೂಲೆ ಟಿಐಎಚ್‍ಎಸ್‍ಎಸ್‍ನಲ್ಲಿ ಜರುಗಿದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮತ್ತು ಜಿಲ್ಲಾ ಪೆÇಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಧ್ವಜಾರೋಹಣ ನೆರವೇರಿಸಿದರು.
ಕಾಸರಗೋಡು ಜಿಎಚ್‍ಎಸ್‍ಎಸ್‍ನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ಅವರಿಗೆ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು. 2010ರ ಆಗಸ್ಟ್ 2ರಂದು ಆರಂಭವಾದ ಸ್ಟೂಡೆಂಟ್ ಪೆÇಲೀಸ್ ಕೆಡೆಟ್ ಯೋಜನೆಯ 14ನೇ ವಾರ್ಷಿಕ ಸಂಭ್ರಮದಲ್ಲಿ ಜಿಲ್ಲೆಯ ಎಲ್ಲ 43 ಎಸ್‍ಪಿಸಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಯಮರ್‍ಮೂಲೆ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಚೆಂಗಳ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ ಅಧ್ಯಕ್ಷತೆ ವಹಿಸಿದ್ದರು. ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಎಂ.ಎ.ಮ್ಯಾಥ್ಯೂ, ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪಿ.ಪ್ರಮೋದ್, ಶಾಲಾ ವ್ಯವಸ್ಥಾಪಕ ಅಬ್ದುಲ್ಲ ಹಾಜಿ, ಮುಖ್ಯ ಶಿಕ್ಷಕ ಪಿ.ನಾರಾಯಣನ್, ಎಸ್‍ಪಿಸಿ ಸಹಾಯಕ ಜಿಲ್ಲಾ ನೋಡಲ್ ಅಧಿಕಾರಿ ಟಿ.ತಂಬಾನ್, ಸಿಬ್ಬಂದಿ ಕಾರ್ಯದರ್ಶಿ ಎಂ.ಎ.ಮುಮ್ತಾಜ್ ಉಪಸ್ಥಿತರಿದ್ದರು.
ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ರಾಮನಗರ ಸರ್ಕಾರಿ ಹೈಯರ್ ಸೆಕೆಂಡರಿಶಾಲೆ, ಚೆಮ್ನಾಡು ಜಮಾತ್ ಹೈಯರ್ ಸೆಕೆಂಡರಿ ಶಾಲೆ, ಉದಿನೂರು ಅಲೇಕಲ್ ಹೈಯರ್ ಸೆಕೆಂಡರಿ ಶಾಲೆ, ಇರಿಯಣ್ಣಿ ಸರ್ಕಾರಿ ಪ್ರೌಢಶಾಲೆ, ಪೆರಿಯಾ ಸರ್ಕಾರಿ ಪ್ರೌಢಶಾಲೆ, ಕುಂಡಂಗುಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದ ಅಂಗವಾಗಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರವೃತ್ತಿ, ಮಾದಕ ವ್ಯಸನ, ಹೆಚ್ಚುತ್ತಿರುವ ಆನ್‍ಲೈನ್ ಗೇಮ್ ಮತ್ತು ಇಂಟರ್ನೆಟ್ ಅಪಾಯಗಳ ವಿರುದ್ಧ ವಿವಿಧ ಶಾಲೆಗಳಲ್ಲಿ ಫ್ಲಾಶ್ ಮಾಬ್ ಮತ್ತು ಸ್ಕಿಟ್‍ಗಳನ್ನು ನಡೆಸಲಾಯಿತು.