ತಿರುವನಂತಪುರಂ: ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗದ ಹಿನ್ನೆಲೆ ಬಿಸಿಗಾಳಿಯಂತಹ ಪರಿಸ್ಥಿತಿಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಗರಿಷ್ಠದತ್ತ ಸಾಗುತ್ತಿರುವ ಬೆನ್ನಲ್ಲೇ ಇದೀಗ ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರ (KDMI) ರಾಜ್ಯದ 14 ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯೊಂದನ್ನು ನೀಡಿದೆ.
ಮಳೆ ಬೀಳದ ಕಾರಣ ಕೇರಳದ 14 ಜಿಲ್ಲೆಗಳಿಗೆ ಬಿಸಿಲಿನ ತಾಪ ತಟ್ಟಿದ್ದು, ರಾಜ್ಯದಲ್ಲಿ ಪರಿಣಾಮಕಾರಿ ಶಾಖ ಸೂಚ್ಯಂಕವು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಹಾಗಾಗಿ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಬರುವುದನ್ನು ತಪ್ಪಿಸುವಂತೆ ಹೇಳಲಾಗಿದೆ. ಮಳೆಯಿಲ್ಲದೆ ಬರಗಾಲದ ಭೀತಿ ಎದುರಾಗಿದೆ. ನೀರು ವ್ಯರ್ಥವಾಗದಂತೆ ಮಿತವಾಗಿ ಬಳಕೆ ಮಾಡಿ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಜನರಿಗೆ ಸಲಹೆ ನೀಡಿದೆ.
ವಿಶೇಷವಾಗಿ ಹಗಲಿನಲ್ಲಿ ಆಲ್ಕೋಹಾಲ್, ಕಾಫಿ, ಟೀ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳಂತಹ ನಿರ್ಜಲೀಕರಣದ ಪಾನೀಯಗಳ ಸೇವನೆಯನ್ನು ತಪ್ಪಿಸಲು ಜನರಿಗೆ ಕೋರಲಾಗಿದೆ. ಹೆಚ್ಚುತ್ತಿರುವ ಶಾಖದಿಂದ ಅರಣ್ಯ ಪ್ರದೇಶಗಳ ಸುತ್ತಮುತ್ತ ಕಾಡ್ಗಿಚ್ಚುಗಳು ಹರಡುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರು ಮತ್ತು ಕಾಡಿನ ಸಮೀಪ ವಾಸಿಸುವ ಜನರು ಅಗತ್ಯ ಕಾಳಜಿ ವಹಿಸಬೇಕು, ಅರಣ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ
'ವೃದ್ಧರು, ಗರ್ಭಿಣಿಯರು, ಮಕ್ಕಳು, ಅಂಗವಿಕಲರು ಮತ್ತು ಇತರ ಖಾಯಿಲೆಗಳಿಂದ ಬಳಲುತ್ತಿರುವವರು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ನಡುವೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಂತೆ ವಿಶೇಷ ಕಾಳಜಿ ವಹಿಸಬೇಕು' ಎಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.