ತಿರುವನಂತಪುರಂ: ಗಣೇಶೋತ್ಸವ ಟ್ರಸ್ಟ್ ಕಮಿಟಿ ಮತ್ತು ಶಿವಸೇನೆ ಜಂಟಿ ಆಶ್ರಯದಲ್ಲಿ ಗಣೇಶೋತ್ಸವ ಆಚರಣೆಗಳು ಆಗಸ್ಟ್ 16 ಬುಧವಾರದಿಂದ ಆರಂಭವಾಗಲಿವೆ.
ಬೆಳಗ್ಗೆ 10.30ಕ್ಕೆ ಪಜವಂಗಡಿಯಲ್ಲಿ ರಾಜ್ಯ ಮಟ್ಟದ ಗಣೇಶೋತ್ಸವ ಆಚರಣೆಯನ್ನು ಸಂಸದ ಶಶಿತರೂರು ಉದ್ಘಾಟಿಸುವರು.
ಜಿಲ್ಲೆಯ 208 ಕೇಂದ್ರಗಳಲ್ಲಿ ಗಣೇಶ ಮೂರ್ತಿ ಪೂಜೆ ನಡೆಯಲಿವೆ. ಸಿಂಹ ಮಾಸದ ಶುಕ್ಲಪಕ್ಷದ ದಿನಗಳಲ್ಲಿ ಗಣಪತಿಯ ಆರಾಧನೆ ವ್ಯಾಪಕವಾಗಿದ್ದು, ಈ ಸಮಯದಲ್ಲಿ ಗಣೇಶನ ಪೂಜೆ ಮಾಡುವವರಿಗೆ ಅಭೀಷ್ಠ ಕಾರ್ಯ ಸಿದ್ಧಿಸುತ್ತದೆ ಎಂದು ನಂಬಲಾಗಿದೆ.
ತ್ರಿಮುಗಗಣಪತಿ, ಶಕ್ತಿಗಣಪತಿ, ತರುಣಗಣಪತಿ, ವೀರಗಣಪತಿ, ದೃಷ್ಟಿ ಗಣಪತಿ, ಲಕ್ಷ್ಮೀವಿನಾಯಕ, ಬಾಲಗಣಪತಿ, ಹೇರಂಬಗಣಪತಿ, ಪಂಚಮುಗಗಣಪತಿ ಹೀಗೆ 32 ರೂಪಗಳಲ್ಲಿ ಗಣೇಶ ಮೂರ್ತಿಗಳು ಹಾಗೂ ವಕ್ರತುಂಡ, ಗಜಮುಖ, ಏಕದಂತ, ಮಹೋರಣ ಮೊದಲಾದ ಎಂಟು ಅವತಾರಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಸಿದ್ದತೆಯಲ್ಲಿ ಭಕ್ತರು ಇದೀಗ ಕಾರ್ಯೋನ್ಮುಖರಾಗಿದ್ದಾರೆ. 16ರಂದು ಪಜವಂಗಡಿ ಗಣಪತಿ ದೇವಸ್ಥಾನದ ಬಳಿ ಸ್ಥಾಪಿಸಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶ ಪೂಜೆ ಆರಂಭವಾಗಲಿದೆ.
ಶಾಂತಿಗಿರಿ ಆಶ್ರಮದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗುರುರತ್ನಂ ಜ್ಞಾನತಪಸ್ವಾನಿ, ಚಿತ್ರನಟ ದಿನೇಶ್ ಪಣಿಕ್ಕರ್, ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ. ವಿ.ವಿ ರಾಜೇಶ್, ಕೌನ್ಸಿಲರ್ ಜಾನ್ಸನ್ ಜೋಸೆಫ್, ಟ್ರಸ್ಟಿಗಳಾದ ಶಿವಾಜಿ ಜಗನ್ನಾಥನ್, ಎಸ್.ಎನ್.ರಘುಚಂದ್ರನ್ ನಾಯರ್, ರಾಧಾಕೃಷ್ಣನ್ ಬ್ಯೂಸ್ಟಾರ್, ಶ್ರೀಕುಮಾರ್ ಚಂದ್ರಪ್ರೆಸ್, ಮಣಕಾಡ್ ರಾಮಚಂದ್ರನ್, ವಟ್ಟಿಯೂರ್ಕಾವ್ ಮಧುಸೂದನನ್ ನಾಯರ್, ಸಲೀಂ ಮಟ್ಟಪಲ್ಲಿ, ಕಳ್ಳಿಯೂರು ಸಸಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್ ಕಮಿಟಿ ಗಣೇಶೋತ್ಸವದ ಸಂದರ್ಭದಲ್ಲಿ ಮನೆಗಳಲ್ಲಿ ಪೂಜಿಸಲು ಸಣ್ಣ ವಿಗ್ರಹಗಳನ್ನು ಲಭ್ಯವಾಗುವಂತೆ ಮಾಡಿದೆ. ಭಕ್ತರು ಐದು ದಿನ, ಮೂರು ದಿನ ಅಥವಾ ಒಂದು ದಿನ ಮನೆಯಲ್ಲಿ ಪೂಜೆ ಸಲ್ಲಿಸಿ ಗಣೇಶೋತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆ 0471 3134618, 9446872288 ಸಂಪರ್ಕಿಸಬಹುದು.