ವಯಡಕ್ಟ್ ನಿರ್ಮಾಣಕ್ಕಾಗಿ ಸೋಮವಾರ ತಡರಾತ್ರಿ ಉಕ್ಕಿನ ತೊಲೆಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದಾಗ 700 ಟನ್ ಭಾರದ ಯಂತ್ರ (ಕ್ರೇನ್) 35 ಮೀಟರ್‌ನಷ್ಟು ಎತ್ತರದಿಂದ ಕುಸಿದು ಈ ಅವಘಡ ಸಂಭವಿಸಿದೆ ಎಂದು ಕಾಮಗಾರಿ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ದಿ ನಿಗಮ (ಎಂಎಸ್‌ಆರ್‌ಡಿಸಿ) ತಿಳಿಸಿದೆ.
'10 ಮಂದಿ ಕಾರ್ಮಿಕರು, ಇಬ್ಬರು ಎಂಜಿನಿಯರ್‌ಗಳು ಹಾಗೂ ನಿಗಮದ ಐವರು ನೌಕರರು ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಠಾಣೆ ಜಿಲ್ಲೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ತಿಳಿಸಿದೆ.
2.28 ಕಿ.ಮೀ. ಉದ್ದದ ವಯಡಕ್ಟ್ ನಿರ್ಮಿಸಲಾಗುತ್ತಿದೆ. 15ನೇ ಪಿಲ್ಲರ್‌ನಿಂದ 16ನೇ ಪಿಲ್ಲರ್‌ಗೆ ಉಕ್ಕಿನ ತೊಲೆಗಳನ್ನು ಸಾಗಿಸುವ ವೇಳೆ ಯಂತ್ರ ಕುಸಿದಿದೆ. ವಯಡಕ್ಟ್‌ನಲ್ಲಿ ಒಟ್ಟು 114 ವಿಭಾಗಗಳಿದ್ದು, 98 ವಿಭಾಗಗಳನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ನಿಗಮ ತಿಳಿಸಿದೆ.
ಇಬ್ಬರು ಗುತ್ತಿಗೆದಾರರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಪರಿಹಾರ: ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ, ಗಾಯಾಳುಗಳಿಗೆ ₹ 50 ಸಾವಿರ ನೆರವು ಘೋಷಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೂ ಸಂತಾಪ ಸೂಚಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಶಿಂದೆ ಘೋಷಿಸಿದ್ದಾರೆ.
701 ಕಿ.ಮೀ. ಉದ್ದದ 'ಸಮೃದ್ಧಿ ಎಕ್ಸ್‌ಪ್ರೆಸ್‌ವೇ' ಮುಂಬೈ ಮತ್ತು ನಾಗ್ಪುರ ನಡುವೆ ಸಂಪರ್ಕ ಕಲ್ಲಿಸುತ್ತದೆ. 10 ಜಿಲ್ಲೆಗಳ ಮೂಲಕ ಹಾಯ್ದು ಹೋಗುವ ಈ ಹೆದ್ದಾರಿ ಪೈಕಿ 600 ಕಿ.ಮೀ. ಉದ್ದದಷ್ಟು ಮಾರ್ಗದ ನಿರ್ಮಾಣ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತಗೊಂಡಿದೆ.