ವಾಷಿಂಗ್ಟನ್: ಅಮೆರಿಕ ಮತ್ತು ಯುರೋಪ್ ನಗರಗಳಲ್ಲಿ ಉಷ್ಣ ಮಾರುತ ಹಾಗೂ ಕಾಡ್ಗಿಚ್ಚುಗಳು ವ್ಯಾಪಕವಾಗಿದ್ದರಿಂದ ಈ ವರ್ಷದ ಜುಲೈ 1880ರ ನಂತರ ದಾಖಲೆಯ ಬಿಸಿ ತಿಂಗಳಾಗಿತ್ತು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದೃಢಪಡಿಸಿದೆ. ನಾಸಾದ ದಾಖಲೆಯಲ್ಲಿರುವ ಯಾವುದೇ ಜುಲೈ ತಿಂಗಳಿಗಿಂತ 2023ರ ಜುಲೈ ಮಾಸ 0.24 ಡಿಗ್ರಿ ಸೆಲ್ಸಿಯಸ್ ಅಧಿಕ ಬಿಸಿಯಾಗಿತ್ತು.
ಹಾಗೂ 1951 ಮತ್ತು 1980ರ ನಡುವಿನ ಸರಾಸರಿ ಬಿಸಿಗಿಂತ 1.18 ಡಿಗ್ರಿ ಸೆಲ್ಸಿಯಸ್ ಬಿಸಿಯಾಗಿತ್ತು. ಜಾಗತಿಕ ತಾಪಮಾನ ದಾಖಲೆಯಲ್ಲಿರುವ ಇತರ ಯಾವುದೇ ತಿಂಗಳಿಗಿಂತ 2023ರ ಜುಲೈ ತಿಂಗಳು ಅಧಿಕ ಬಿಸಿಯಾಗಿತ್ತು ಎಂದು ನ್ಯೂಯಾರ್ಕ್ನಲ್ಲಿರುವ ನಾಸಾದ ಗೊಡ್ಡಾರ್ಡ್ ಬಾಹ್ಯಾ ಕಾಶ ಅಧ್ಯಯನಗಳ ಸಂಸ್ಥೆ (ಜಿಐಎಸ್ಎಸ್) ವಿಜ್ಞಾನಿಗಳು ಹೇಳಿದ್ದಾರೆ.
ಐದೂ ಜುಲೈಗಳು: 1880ರಿಂದೀಚೆಗೆ ದಾಖಲಾದ ಐದೂ ಅತಿ ಹೆಚ್ಚು ಬಿಸಿ ಜುಲೈ ತಿಂಗಳುಗಳು ಕಳೆದ 5 ವರ್ಷಗಳಲ್ಲಿ ದಾಖಲಾಗಿರುವುದು ನಾಸಾ ದತ್ತಾಂಶ ತಿಳಿಸಿದೆ.
ಸಮುದ್ರ ಮೇಲ್ಮೈ ಕೊಡುಗೆ: ಸಮುದ್ರದ ಮೇಲ್ಮೈ ಮೇಲಿನ ಅತಿಯಾದ ತಾಪಮಾನ ಜುಲೈ ತಿಂಗಳ ಶಾಖಕ್ಕೆ ಕೊಡುಗೆ ನೀಡಿದೆ. ಪೆಸಿಫಿಕ್ ಸಾಗರದ ಪೂರ್ವ ಉಷ್ಣವಲಯದ ಮೇಲ್ಮೈ ತಾಪಮಾನ ವಿಶೇಷವಾಗಿ ಇದಕ್ಕೆ ಕಾರಣ ಎಂಬುದು ನಾಸಾ ವಿಶ್ಲೇಷಣೆಯಿಂದ ತಿಳಿದು ಬಂದಿದೆ. 2023ರ ಮೇ ಮಾಸದಲ್ಲಿ ಆರಂಭವಾದ ಎಲ್ ನಿನೊ ಇದಕ್ಕೆ ಸಾಕ್ಷಿಯಾಗಿದೆ. ದಕ್ಷಿಣ ಅಮೆರಿಕ, ಉತ್ತರ ಆಫ್ರಿಕಾ, ಉತ್ತರ ಅಮೆರಿಕ ಮತ್ತು ಅಂಟಾರ್ಕ್ಟಿಕ್ ಪರ್ಯಾಯ ದ್ವೀಪದ ಭಾಗಗಳು ಸರಾಸರಿಗಿಂತ 4 ಡಿಗ್ರಿ ಸೆಲ್ಶಿಯಸ್ ಅಧಿಕ ತಾಪಮಾನವನ್ನು ಅನುಭವಿಸುತ್ತಿವೆ.
2023ರ ಜುಲೈ ಅತ್ಯಂತ ಹೆಚ್ಚು ತಾಪಮಾನದಿಂದ ಕೂಡಿತ್ತು ಎಂದು ಕೋಟ್ಯಂತರ ಜನ ನಂಬಿದ್ದನ್ನು ನಾಸಾ ಅಂಕಿಅಂಶ ದೃಢಪಡಿಸಿದೆ. ಈಗ ಅಮೆರಿಕದ ಮೂಲೆಮೂಲೆಯಲ್ಲೂ ಜನರು ತಾಪಮಾನ ಬಿಕ್ಕಟ್ಟಿನ ಬಿಸಿಯನ್ನು ಸ್ವತಃ ಅನುಭವಿಸುತ್ತಿದ್ದಾರೆ. ಇದು ಅಧ್ಯಕ್ಷ ಜೋ ಬೈಡೆನ್ರ ಐತಿಹಾಸಿಕ ಹವಾಮಾನ ಅಜೆಂಡಾದ ತುರ್ತನ್ನು ಎತ್ತಿ ತೋರಿಸುತ್ತದೆ ಎಂದು ನಾಸಾ ಆಡಳಿತಗಾರ ಬಿಲ್ ನೆಲ್ಸನ್ ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ. ವಿಜ್ಞಾನ ಸ್ಪಷ್ಟವಾಗಿದೆ. ನಮ್ಮ ಜನರು ಮತ್ತು ಇಳೆಯನ್ನು ರಕ್ಷಿಸಲು ನಾವು ಈಗ ಕಾರ್ಯಪ್ರವೃತ್ತರಾಗಬೇಕಿದೆ ಎಂದು ನೆಲ್ಸನ್ ಹೇಳಿದ್ದಾರೆ.