ಕಾಸರಗೋಡು: ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾಗತಿಕ ಹೂಡಿಕೆದಾರರ ಸಹಭಾಗಿತ್ವದಲ್ಲಿ ಜಿಲ್ಲಾ ಪಂಚಾಯತ್ ಆಯೋಜಿಸಿರುವ 'ರೈಸಿಂಗ್ ಕಾಸರಗೋಡು ಹೂಡಿಕೆದಾರರ ಸಮಾವೇಶ ಸೆಪ್ಟಂಬರ್ 18ರಂದು ಆರಂಭಗೊಳ್ಳಲಿದೆ. ಉದುಮದ ಲಲಿತ್ ಹೊಟೇಲ್ ಸಭಾಂಗಣದಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶವನ್ನು ಕೈಗಾರಿಕಾ ಸಚಿವ ಪಿ.ರಾಜೀವ್ ಉದ್ಘಾಟಿಸುವರು.
ಜಗತ್ತಿನ ವಿವಿಧೆಡೆ ನೆಲೆಸಿರುವವರು ಹಾಗೂ ಕಾಸರಗೋಡು ಮೂಲದವರಾಗಿದ್ದು, ಪ್ರಸಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಎರಡು ದಿವಸಗಳ ಕಾಲ ನಡೆಯುವ ಸಮಾವೇಶದಲ್ಲಿ ಆಯ್ದ ನೂರು ಮಂದಿ ಹೂಡಿಕೆದಾರರು ಭಾಗವಹಿಸಲಿದ್ದಾರೆ. ಜತೆಗೆ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ಯುವ ಉದ್ಯಮಿಗಳು ಸುಮಾರು ಇಪ್ಪತ್ತು ವಿಚಾರಗಳನ್ನು ಮಂಡಿಸಲಿದ್ದಾರೆ. ಜಿಲ್ಲೆಯಲ್ಲಿ ಹೂಡಿಕೆದಾರರ ಸಭೆಯಲ್ಲಿ ಆಯ್ಕೆಯಾದ ಉದ್ದಿಮೆಗಳನ್ನು ಆರಂಭಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಅಗತ್ಯ ನೆರವು ಒದಗಿಸಲಿದೆ. ಸೆ. 19ರಂದು ನಡೆಯುವ ಸಮಾರಂಭದಲ್ಲಿ ಹಣಕಾಸು ಸಚಿವ ಸಚಿವ ಕೆ.ಎನ್.ಬಾಲಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ.ವೇಣು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎ.ಪಿ.ಎಂ ಮಹಮ್ಮದ್ ಹನೀಷ್, ಕೈಗಾರಿಕಾ ಇಲಾಖೆ ನಿರ್ದೇಶಕ ಎಸ್.ಹರಿಕಿಶೋರ್, ಜಿಲ್ಲೆಯ ಪ್ರತಿನಿಧಿಗಳು, ಅಧಿಕಾರಿಗಳು ಮೊದಲಾದವರು ಭಾಗವಹಿಸುವರು.
ಕರಡು ಯೋಜನೆ ಸ್ವೀಕಾರ:
ರೈಸಿಂಗ್ ಕಾಸರಗೋಡು ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆದಾರರ ಮುಂದೆ ಯೋಜನೆಯ ವಿಚಾರಗಳನ್ನು ಮಂಡಿಸಬಹುದಾಗಿದ್ದು, ಆಸಕ್ತ ಉದ್ಯಮಿಗಳು ಕರಡು ಯೋಜನೆಗಳನ್ನು ಆಗಸ್ಟ್ 11ರ ಮೊದಲು ಇಮೇಲ್(ಡಿisiಟಿgಞಚಿsಚಿಡಿgoಜ@gmಚಿiಟ.ಛಿom.)ಮೂಲಕ ಕಳುಹಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(8921307823)ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.