ಮುಂಬೈ: ಕೋವಿಡ್-19 ಸಂತ್ರಸ್ತರಿಗೆ ಮೀಸಲಾದ ಬಾಡಿ ಬ್ಯಾಗ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದಡಿಯಲ್ಲಿ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು ಮುಂಬೈ ಮಾಜಿ ಮೇಯರ್ ಮತ್ತು ಶಿವಸೇನಾ (ಯುಬಿಟಿ) ನಾಯಕಿ ಕಿಶೋರಿ ಪಡ್ನೇಕರ್ ಮತ್ತು ಇಬ್ಬರು ನಾಗರಿಕ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಶುಕ್ರವಾರ ಮುಂಬೈನ ಅಗ್ರಿಪಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಶೋರಿ ಪಡ್ನೇಕರ್ ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಜುಲೈನಲ್ಲಿ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಪಡ್ನೇಕರ್ ಮತ್ತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ 420 (ಮೋಸ) ಮತ್ತು 120 (B) (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಅವರನ್ನು ಸಂಪರ್ಕಿಸಿದಾಗ, 'ಬಾಡಿ ಬ್ಯಾಗ್ ಹಗರಣಕ್ಕೆ ಸಂಬಂಧಿಸಿದಂತೆ ನಾವು ಈ ವರ್ಷದ ಜುಲೈನಲ್ಲಿ ದೂರು ದಾಖಲಿಸಿದ್ದೇವೆ. ತಲಾ 1,500 ಮೌಲ್ಯದ ಬಾಡಿ ಬ್ಯಾಗ್‌ಗಳನ್ನು ತಲಾ 6,700 ರೂ ನಂತೆ ಖರೀದಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಹಣವನ್ನು ದೋಚಲಾಗಿದೆ. ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಇದೀಗ ಕಿಶೋರಿ ಪಡ್ನೇಕರ್ ಮತ್ತು ಸಹಾಯಕ ಮುನ್ಸಿಪಲ್ ಕಮಿಷನರ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಈ ಸಂಬಂಧ ದಾಳಿ ನಡೆಸಿತ್ತು," ಎಂದು ತಿಳಿಸಿದ್ದಾರೆ.
ಕಿಶೋರಿ ಪಡ್ನೇಕರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಸೇರಿದವರಾಗಿದ್ದು, ಅವರು ನವೆಂಬರ್ 2019 ರಿಂದ ಮಾರ್ಚ್ 2022 ರವರೆಗೆ ಮುಂಬೈ ಮೇಯರ್ ಆಗಿದ್ದರು.