ನವದೆಹಲಿ: ಭಾರತದ ಸಂವಿಧಾನಕ್ಕೆ ಸೇರಿಸಲಾದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಅವಧಿಯು 1957ರಲ್ಲಿ ಕೊನೆಗೊಂಡ ಬಳಿಕ ರದ್ಧಾಗಿಬಿಡುತ್ತದೆ ಎಂಬ ವಾದವು 'ಸ್ವೀಕಾರಾರ್ಹವಲ್ಲ' ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಅರ್ಜಿದಾರ ಪ್ರೇಮಶಂಕರ್ ಝಾ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ದಿನೇಶ್ ದ್ವಿವೇದಿ ಅವರು ಮುಂದಿಟ್ಟ ವಾದವನ್ನು ಪೀಠವು ಒಪ್ಪಲಿಲ್ಲ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು 2019ರ ಆಗಸ್ಟ್ 5ರಂದು ರದ್ದುಪಡಿಸಿದ್ದನ್ನು ಝಾ ಅವರು ಪ್ರಶ್ನಿಸಿದ್ದಾರೆ. ಸಂವಿಧಾನ ರಚನಾ ಸಭೆಯೇ ಬರ್ಖಾಸ್ತುಗೊಂಡ ಬಳಿಕ 370ನೇ ವಿಧಿ ಅಸ್ತಿತ್ವದಲ್ಲಿ ಇರುತ್ತದೆ ಎಂಬುದರ ಬಗ್ಗೆಯೇ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂವಿಧಾನ ಪೀಠವು, ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಪರಿಶೀಲಿಸಬೇಕಾಗಿದೆ. ಜೊತೆಗೆ, 370ನೇ ವಿಧಿಯನ್ನು ಯಾವ ರೀತಿಯಲ್ಲಿ ರೂಪಿಸಬೇಕು ಎಂಬ ಇಚ್ಛೆ ಸಂವಿಧಾನ ರಚನಕಾರರಲ್ಲಿ ಇತ್ತು ಎಂಬುದನ್ನೂ ತಿಳಿಯಬೇಕಿದೆ ಎಂದಿತು.
ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸೇರಿ ಐವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠದಲ್ಲಿ ಮಂಗಳವಾರವೂ ನಡೆಯಿತು.
'1957ರಲ್ಲಿ ಜಮ್ಮು-ಕಾಶ್ಮೀರಕ್ಕೆ ಭಾರತದ ಸಂವಿಧಾನ ಅನ್ವಯವಾಗುವುದು ಸ್ಥಗಿತಗೊಂಡಿದ್ದರೆ, ಒಟ್ಟಾರೆ ಪರಿಣಾಮ ಏನಾಗಬಹುದಿತ್ತು' ಎಂದು ಅರ್ಜಿದಾರರೊಬ್ಬರ ಪರ ವಕೀಲರನ್ನು ಚಂದ್ರಚೂಡ್ ನೇತೃತ್ವದ ಪೀಠ ಪ್ರಶ್ನಿಸಿತು.
'ಭಾರತದ ಸಂವಿಧಾನದಡಿ ರಚನೆಯಾದ ಯಾವುದೇ ಕಾನೂನು ಜಮ್ಮು-ಕಾಶ್ಮೀರಕ್ಕೆ ಅನ್ವಯವೇ ಆಗುವುದಿಲ್ಲ ಎಂಬುದನ್ನು ಒಪ್ಪಲು ಹೇಗೆ ಸಾಧ್ಯ' ಎಂದೂ ಕೇಳಿತು.
'ಭಾರತ ಒಕ್ಕೂಟದಲ್ಲಿ ಜಮ್ಮು-ಕಾಶ್ಮೀರ ಸೇರ್ಪಡೆಯನ್ನು ಭಿನ್ನ ನೆಲೆಯಲ್ಲಿ ಅವಲೋಕಿಸಬೇಕು' ಎಂದು ದ್ವಿವೇದಿ ಅವರು ಪೀಠದ ಗಮನ ಸೆಳೆದರು.
'ಜಮ್ಮು-ಕಾಶ್ಮೀರವು ಒಂದು ಸ್ವತಂತ್ರ ರಾಜ್ಯವಾಗಿ ಅಥವಾ ದೇಶವಾಗಿ ಭಾರತಕ್ಕೆ ಸೇರ್ಪಡೆಯಾಯಿತು ಎಂದು ಹೇಳುವುದು ಒಂದೆಡೆಯಾದರೆ, ಇತರ ರಾಜ್ಯಗಳಂತೆ ಇದು ಭಾರತದೊಂದಿಗೆ ವಿಲೀನವಾಯಿತು ಎಂದು ಹೇಳುವುದು ಬೇರೆ' ಎಂದು ದ್ವಿವೇದಿ ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಭಾರತದ ಸಂವಿಧಾನದ 245ನೇ ವಿಧಿಗೆ ಸಮಾನವಾಗಿ ಜಮ್ಮು ಮತ್ತು ಕಾಶ್ಮೀರ ಸಂವಿಧಾನದಲ್ಲಿ ಇರುವ ಅಂಶ ಯಾವುದು' ಎಂದು ಪ್ರಶ್ನಿಸಿತು.
ಜಮ್ಮು-ಕಾಶ್ಮೀರ ಸಂವಿಧಾನದ 3, 4 ಹಾಗೂ 5 ವಿಧಿಗಳನ್ನು ದ್ವಿವೇದಿ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಕಾನೂನು ರೂಪಿಸಲು ಸಂಸತ್ತು ಹೊಂದಿರುವ ಅಧಿಕಾರವನ್ನು ಹೊರತುಪಡಿಸಿ, ಇತರೆಲ್ಲ ವಿಚಾರಗಳ ಮೇಲೆ ರಾಜ್ಯವು ಕಾರ್ಯಾಂಗ ಮತ್ತು ಶಾಸಕಾಂಗೀಯ ಅಧಿಕಾರವನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು ಹೇಳುತ್ತದೆ ಎಂದು ಪೀಠವು ಹೇಳಿದೆ. ಭಾರತದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯ ಎಂಬುದು ತಮ್ಮ ನಂಬಿಕೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.