ನವದೆಹಲಿ: ಲ್ಯಾಪ್‌ಟಾಪ್ ತಯಾರಕರಿಗೆ ತೀವ್ರ ಹಿನ್ನಡೆಯಾಗಿದ್ದು, ನವೆಂಬರ್ 1 ರ ನಂತರ ದೇಶದಲ್ಲಿ ಲ್ಯಾಪ್‌ಟಾಪ್, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್‌ಗಳ ಆಮದು ನಿರ್ಬಂಧಿಸುವ ತನ್ನ ನಿರ್ದೇಶನವನ್ನು ಮುಂದೂಡಲು ಕೇಂದ್ರ ಸರ್ಕಾರ ಸೋಮವಾರ ನಿರಾಕರಿಸಿದೆ.
ಕೇಂದ್ರ ಸರ್ಕಾರ ಆಗಸ್ಟ್ 4 ರಂದು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದನ್ನು ನಿರ್ಬಂಧಿಸಿತ್ತು ಮತ್ತು ನಂತರ ಈ ಆದೇಶವನ್ನು ನವೆಂಬರ್ 1, 2023 ರವರೆಗೆ ಮುಂದೂಡಲು ನಿರ್ಧರಿಸಿತು. ಆದರೆ ಈಗ ಅದನ್ನು ಮತ್ತೆ ಮುಂದೂಡಲು ನಿರಾಕರಿಸಿದೆ.
ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಉತ್ಪಾದಿಸಲು ಆರಂಭಿಸಿದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್(ಪಿಎಲ್‌ಐ) ಯೋಜನೆಗೆ ದೊರೆತ ಪ್ರತಿಕ್ರಿಯೆಯಿಂದ ಸರ್ಕಾರ ಸಂತಸಗೊಂಡಿದೆ. ಆದ್ದರಿಂದ ಉತ್ತೇಜನಕ್ಕೆ ಹೆಚ್ಚಿನ ಸಮಯ ನೀಡುವ ಅಗತ್ಯವಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ(MeitY) ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ಅವರು ಹೇಳಿದ್ದಾರೆ.
ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಹಲವು ಕಂಪನಿಗಳು ಮುಂದೆ ಬಂದಿವೆ. ಇದುವರೆಗೆ, ನಾವು ಯೋಜನೆಗಾಗಿ 58 ನೋಂದಣಿಗಳನ್ನು ಸ್ವೀಕರಿಸಿದ್ದೇವೆ. ಅವು ದೊಡ್ಡ ಮತ್ತು ಸಣ್ಣ ಘಟಕಗಳನ್ನು ಒಳಗೊಂಡಿವೆ. ಯೋಜನೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 30, 2023 ಕೊನೆ ದಿನ ಆಗಿರುವುದರಿಂದ, ಇನ್ನೂ ಹೆಚ್ಚಿನ ನೋಂದಣಿಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಶರ್ಮಾ ಅವರು ತಿಳಿಸಿದ್ದಾರೆ.