ನವದೆಹಲಿ: ಕೋಮುಗಲಭೆಯಿಂದ ನಲುಗಿರುವ ಹರಿಯಾಣ ರಾಜ್ಯದ ನೂಹ್ ಜಿಲ್ಲೆಯಲ್ಲಿ ಈಗ ಜೆಸಿಬಿಗಳು ಘರ್ಜಿಸುತ್ತಿವೆ. ಅಕ್ರಮ ಕಟ್ಟಡಗಳೆಂಬ ಹಣೆಪಟ್ಟಿ ಹೊತ್ತ ಸುಮಾರು 60ಕ್ಕೂ ಹೆಚ್ಚು ಅಂಗಡಿಗಳು ನೆಲಸಮವಾಗಿವೆ. ಜಿಲ್ಲಾಡಳಿತ ಕೈಗೊಂಡಿರುವ ಈ ಕಾರ್ಯಾಚರಣೆಯಲ್ಲಿ ಸುಮಾರು 2 ಡಜನ್‌ನಷ್ಟು ಔಷಧ ಅಂಗಡಿಗಳೂ ಸೇರಿವೆ.
ಗುರುವಾರದಿಂದ ಆರಂಭವಾಗಿರುವ ಈ ಕಾರ್ಯಾಚರಣೆಯು ಮೂರನೇ ದಿನವಾದ ಶನಿವಾರವೂ ಮುಂದುವರಿಯಿತು. ಗಲಭೆ ಪೀಡಿತ ನೂಹ್‌ನಿಂದ 20 ಕಿ.ಮೀ. ದೂರದಲ್ಲಿರುವ ವಲಸಿಗರೇ ಹೆಚ್ಚು ಇರುವ ತವಡು ಪ್ರದೇಶದಲ್ಲಿ ಇದು ನಡೆದಿದೆ.
ಇಲ್ಲಿರುವ ಶಹೀದ್ ಹಸನ್ ಖಾನ್ ಮೆವಾತಿ ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದ ಎದುರಿನ ಪ್ರದೇಶದಲ್ಲಿ ನಡೆದ ತೆರವು ಕಾರ್ಯಚರಣೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೆಲಸಮಗೊಂಡವುಗಳಲ್ಲಿ ಔಷಧ ಅಂಗಡಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲೂ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಮುಂದುವರಿಸಿದೆ.
ಸುಮಾರು 50ರಿಂದ 60 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಬಂಧನ ಭೀತಿಯಿಂದ ಹಲವರು ಊರು ತೊರೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಆದೇಶಿಸಿತ್ತು. ಸ್ಥಳೀಯ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಫ್ತಾಬ್ ಅಹ್ಮದ್ ಅವರು ಜಿಲ್ಲಾಡಳಿತ ಕ್ರಮವನ್ನು ಖಂಡಿಸಿದ್ದಾರೆ.
'ತವಡು ಪ್ರದೇಶದಲ್ಲಿ ನಡೆದಿರುವ ತೆರವು ಕಾರ್ಯಾಚರಣೆಯಲ್ಲಿ ಕಟ್ಟಡಗಳು ಮಾತ್ರ ನೆಲಸಮಗೊಂಡಿಲ್ಲ. ಬದಲಿಗೆ ಹಲವು ಕುಟುಂಬಗಳ ಬದುಕೇ ಬೀದಿಗೆ ಬಿದ್ದಿದೆ. ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಈ ಕಾರ್ಯಾಚರಣೆ ನಡೆಸುವ ಕೆಲವೇ ನಿಮಿಷಗಳ ಮೊದಲು ನೀಡಿರುವ ನೋಟಿಸ್‌ನಲ್ಲಿ ಹಿಂದಿನ ತಿಂಗಳ ದಿನಾಂಕವನ್ನು ನಮೂದಿಸಲಾಗಿದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಿಲ್ಲಾಡಳಿತವು ತಪ್ಪು ಹೆಜ್ಜೆಗಳನ್ನಿಡುತ್ತಿದೆ. ಇದು ಜನವಿರೋಧಿ ನೀತಿಯಾಗಿದೆ' ಎಂದು ವಿಡಿಯೊ ಸಹಿತ ಟ್ವೀಟ್ ಮಾಡಿದ್ದಾರೆ.
ನೂಹ್‌ನಲ್ಲಿ 102 ಎಫ್‌ಐಆರ್ ದಾಖಲು
'ನೂಹ್ ಘಟನೆಯಲ್ಲಿ ಈವರೆಗೂ 202 ಜನರಲ್ಲಿ ಬಂಧಿಸಲಾಗಿದೆ. ಕೋಮು ಗಲಭೆ ಪ್ರಕರಣದಲ್ಲಿ ಮುಂಜಾಗ್ರತಾ ಕ್ರಮವಾಗಿ 80 ಜನರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 102 ಎಫ್‌ಐಆರ್ ದಾಖಲಾಗಿದೆ' ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
'ಗಲಭೆಯ ಹಿಂದೆ ದೊಡ್ಡ ಯೋಜನೆಯೇ ಇದೆ. ಆದರೆ ಪ್ರಕರಣದ ಹಿಂದಿರುವ ವ್ಯಕ್ತಿಯ ಪತ್ತೆ ಈವರೆಗೂ ಆಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.