ನವದೆಹಲಿ: ಅಮೃತಸರದ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ರಿಟನ್ ಸಂಸದ ತನ್ಮನ್‌ಜೀತ್ ಸಿಂಗ್ ಧೇಸಿ ಅವರನ್ನು ವಲಸೆ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ತಡೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಸದರನ್ನು ತಡೆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಲೇಬರ್ ಪಕ್ಷದ ಸಂಸದ ಧೇಸಿ ಅವರು ತಮ್ಮ ವಿದೇಶಿ ಪೌರತ್ವ ಕಾರ್ಡ್ ಹೊಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿಖ್ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ಧೇಸಿ ಅವರನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸುವ ಮೊದಲು ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಬರ್ಮಿಂಗ್‌ಹ್ಯಾಮ್‌ನಿಂದ ಅಮೃತಸರಕ್ಕೆ ಆಗಮಿಸಿದ ಧೇಸಿ ಅವರು ವಿಮಾನ ನಿಲ್ದಾಣದೊಳಗೆ ತಮಗಾದ ತೊಂದರೆ ಅಥವಾ ಸಮಸ್ಯೆಯ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧೇಸಿ ಅವರು ವೈಯಕ್ತಿಕ ಭೇಟಿಗಾಗಿ ಆಗಮಿಸಿದ್ದಾರೆ. ಹೀಗಾಗಿ ಅವರು ನಗರದಲ್ಲಿ ತಂಗಿದ್ದಾಗ ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದಾರೆ ಎಂದು ವಿಮಾನ ನಿಲ್ದಾಣದಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.