ನವದೆಹಲಿ: ಜಾಗತಿಕ ಬೇಡಿಕೆಯಲ್ಲಿನ ಮಂದಗತಿಯ ಹೊರತಾಗಿಯೂ ಭಾರತದ ಸೇವಾ ವಿಭಾಗಗಳಲ್ಲಿನ ಆರೋಗ್ಯಕರ ಬೆಳವಣಿಗೆಯು ದೇಶದ ಒಟ್ಟು ರಫ್ತು ಮತ್ತು ಸರಕು ಮತ್ತು ಸೇವೆಗಳ ಆಮದುಗಳು 2023 ರ ಮೊದಲಾರ್ಧದಲ್ಲಿ 800 ಶತಕೋಟಿ ಡಾಲರ್ ಗಡಿ ದಾಟಲು ನೆರವಾಗಿದೆ ಎಂದು ಥಿಂಕ್ ಟ್ಯಾಂಕ್ ಜಿಟಿಆರ್ ಐ ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವಿಶ್ಲೇಷಣೆಯ ಪ್ರಕಾರ, ಸರಕು ಮತ್ತು ಸೇವೆಗಳ ರಫ್ತು ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ 385.4 ಶತಕೋಟಿ ಡಾಲರ್ ಗೆ ಅಂದರೆ ಶೇ. 1.5 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 379.5 ಶತಕೋಟಿ ಡಾಲರ್ ನಷ್ಟಿತ್ತು. ಆದಾಗ್ಯೂ, ಈ ವರ್ಷದ ಆರು ತಿಂಗಳಲ್ಲಿ ಆಮದುಗಳು ಶೇ. 5.9 ರಷ್ಟು ಕುಸಿತದೊಂದಿಗೆ 415.5 ಬಿಲಿಯನ್ ಡಾಲರ್ ನಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 441.7 ಬಿಲಿಯನ್ ಡಾಲರ್ ನಷ್ಟಿತ್ತು.
"ಭಾರತದ ವಿದೇಶಿ ವ್ಯಾಪಾರ ( ಸರಕು ಮತ್ತು ಸೇವೆಗಳ ರಫ್ತು ಮತ್ತು ಆಮದು) 2023 ರ ಜನವರಿ-ಜೂನ್ ಅವಧಿಯಲ್ಲಿ 800.9 ಶತಕೋಟಿ ಡಾಲರ್ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 2.5 ರಷ್ಟು ಕುಸಿತ ಕಂಡಿದೆ ಎಂದು ವರದಿ ಹೇಳಿದೆ.
"ದುರ್ಬಲವಾದ ಜಾಗತಿಕ ಬೇಡಿಕೆಯಿಂದಾಗಿ ಮತ್ತು ಕಾರ್ಮಿಕ-ತೀವ್ರ ವಲಯಗಳಲ್ಲಿ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುತ್ತಿರುವ ಕಾರಣ ಡೇಟಾ ಸಾಧಾರಣ ಕುಸಿತವನ್ನು ತೋರಿಸುತ್ತಿದೆ. ಭಾರತೀಯ ರೂಪಾಯಿ ಮೌಲ್ಯಯುತವಾಗಿದ್ದರೂ ಸರಕು ರಫ್ತುಗಳಲ್ಲಿ ಕುಸಿತ ಕಂಡುಬಂದಿದೆ. ಭಾರತೀಯ ರೂಪಾಯಿ ಮತ್ತು ಅಮೆರಿಕದ ಡಾಲರ್ ವಿನಿಮಯ ದರವು ಏಪ್ರಿಲ್ 2022 ರಲ್ಲಿ 76.16 ರಿಂದ ಏಪ್ರಿಲ್ 2023 ರಲ್ಲಿ 82.18 ಕ್ಕೆ ಏರಿಕೆಯಾಗಿದೆ ಎಂದು GTRI ಸಹ-ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ, ಅಧಿಕ ಹಣದುಬ್ಬರ, ಬಿಗಿಯಾದ ವಿತ್ತೀಯ ನೀತಿ ಮತ್ತು ಆರ್ಥಿಕ ಅನಿಶ್ಚಿತತೆ ಸೇರಿದಂತೆ ಹಲವಾರು ಅಂಶಗಳಿಂದಾಗಿ 2023 ರ ವಿಶ್ವ ವ್ಯಾಪಾರದ ದೃಷ್ಟಿಕೋನವು ದುರ್ಬಲವಾಗಿದೆ ಎಂದು ಅವರು ಹೇಳಿದರು.
ಆದರೆ ಈ ಅಂಶಗಳು ಶೀಘ್ರದಲ್ಲೇ ಹೊಸ ಸಬ್ಸಿಡಿಗಳು ಮತ್ತು ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ರಕ್ಷಣಾತ್ಮಕ ಕ್ರಮಗಳಿಂದ ಮುಚ್ಚಿಹೋಗುತ್ತವೆ. ಉದಾಹರಣೆಗೆ, 2023 ರ ಮೊದಲ ಏಳು ತಿಂಗಳುಗಳಲ್ಲಿ ಯುರೋಪಿಯನ್ ಒಕ್ಕೂಟ ಹವಾಮಾನ ಬದಲಾವಣೆ ಮತ್ತು ವ್ಯಾಪಾರದ ಮೇಲೆ ಐದು ನಿಯಮಾವಳಿಗಳನ್ನು ಪರಿಚಯಿಸಿದೆ. ಇವುಗಳು ಮೂಲಭೂತವಾಗಿ ಆಮದುಗಳನ್ನು ನಿಗ್ರಹಿಸುವ ಕ್ರಮಗಳಾಗಿವೆ ಎಂದು ಅವರು ಹೇಳಿದರು.
ಭಾರತವು ಉತ್ಪನ್ನದ ಗುಣಮಟ್ಟ ಮತ್ತು ಪೂರೈಕೆ ಸರಪಳಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಪ್ರತಿ ದೊಡ್ಡ ದೇಶವು ಒಳಮುಖ ಕ್ರಮದಲ್ಲಿ ಇರುವುದರಿಂದ, ಭಾರತವು ವಿಶೇಷವಾಗಿ ಮುಕ್ತ ವ್ಯಾಪಾರ ಒಪ್ಪಂದಗಳು) ಮತ್ತು ಇಂಡೋ-ಪೆಸಿಫಿಕ್ ಆರ್ಥಿಕತೆಯ ಹೊಸ ವಿಷಯಗಳಲ್ಲಿ ತನ್ನ ನೀತಿಯನ್ನು ಬಿಟ್ಟುಕೊಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.