ಮಂಜೇಶ್ವರ: ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ಕಲಾಸಂಸ್ಥೆಯು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ಇತ್ತೀಚೆಗೆ ನಡೆಸಿದ ಯಕ್ಷಚಿಗುರು -2023 ಕಾರ್ಯಕ್ರಮ ಜನಮನ ರಂಜಿಸಿತು.
ಯಕ್ಷಚಿಗುರು 2023ರ ಸಭಾಕಾರ್ಯಕ್ರಮ ಅಧ್ಯಕ್ಷತೆಯನ್ನು ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಪಶುಪತಿ ದೇವಾಲಯ ನೇಪಾಳದ ನಿವೃತ್ತ ಅರ್ಚಕ ವೇದಮೂರ್ತಿ ರಾಮ ಕಾರಂತ ಪದ್ಯಾಣ ಭಾಗವಹಿಸಿ ಮಾತನಾಡಿ, ಯಕ್ಷಗಾನದಿಂದ ಜನರಲ್ಲಿ ಧರ್ಮ ಜಾಗೃತಿ ಉಂಟಾಗುತ್ತದೆ. ಪುರಾಣ ಜ್ಞಾನ ಜನಸಾಮಾನ್ಯರಿಗೂ ತಲುಪಿಸುವ ಕೆಲಸ ಯಕ್ಷಗಾನದಿಂದ ಸುದೀರ್ಘಕಾಲದಿಂದ ನಡೆಯುತ್ತಾ ಬಂದಿದೆ. ಇಂದು ಕರಾವಳಿಯಾದ್ಯಂತ ಹಳ್ಳಿ ಹಳ್ಳಿಗಳಲ್ಲೂ ಯಕ್ಷಗಾನ, ತಾಳಮದ್ದಳೆ ನಡೆಯುತ್ತಿರುವುದು ಸಂತಸದ ವಿಚಾರ. ಯಕ್ಷಗಾನ ಸಾಧಕರನ್ನು ಇಂತಹ ಕಾರ್ಯಕ್ರಮದಲ್ಲಿ ಗುರುತಿಸಿ ಮಾನಿಸುವುದು ಉತ್ತಮಕಾರ್ಯವೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿ, ಬೆಂಗಳೂರಿನ ಉದ್ಯಮಿ, ಮೀಯಪದವಿನ ಹುಟ್ಟೂರ ಸಾಧಕ ಕಿಶೋರ್ ರೈ ಮಾತನಾಡಿ, ಯಕ್ಷಗಾನ ಸದಾಚಾರ ಸಂಸ್ಕಾರ ನೀಡಿ ಉತ್ತಮ ಭಾಷಾ ಪ್ರೌಢಿಮೆ ಬೆಳೆಯಿಸುತ್ತದೆ. ಹಳ್ಳಿಯಂಗಳದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಸ್ತುತ್ಯರ್ಹ ಕಾರ್ಯ. ಗುರುನರಸಿಂಹ ಬಳಗದಿಂದ ಇನ್ನಷ್ಟು ಕಲಾ ಕಾರ್ಯಗಳು ಜರಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇದರ ನಿರ್ದೇಶಕ ಕೆ.ವಿ. ರಮೇಶ, ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು ಉಪಸ್ಥಿತರಿದ್ದರು.
ಯಕ್ಷಚಿಗುರು -23 ಪ್ರಶಸ್ತಿಯನ್ನು ತೆಂಕುತಿಟ್ಟಿನ ಏಕೈಕ ಬೊಂಬೆಯಾಟ ಸಂಘವಾದ “ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು” ಸಂಸ್ಥೆಗೆ ಗಣ್ಯರ ಸಮಕ್ಷಮ ಪ್ರದಾನ ಗೈಯಲಾಯಿತು.
ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿ, ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಯಕ್ಷಚಿಗುರು 2023ರ ಭಾಗವಾಗಿ ಅಪರಾಹ್ನ ನಾಡಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಶಲ್ಯ ಸಾರಥ್ಯ” ಜರಗಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೈತನ್ಯಕೃಷ್ಣ ಪದ್ಯಾಣ, ಭಾಸ್ಕರ ಕೋಳ್ಯೂರು, ಜಿತೇಶ್ ಕೋಳ್ಯೂರು, ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು, ಅರ್ಥಧಾರಿಗಳಾಗಿ ಪ್ರೊ.ಪವನ್ ಕಿರಣ್ ಕೆರೆ, ಹರೀಶ ಬಳಂತಿಮೊಗರು, ನಾಗರಾಜ ಪದಕಣ್ಣಾಯ ಮೂಡಂಬೈಲು ಪಾಲ್ಗೊಂಡಿದ್ದರು. ರಾತ್ರಿ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದವರಿಂದ “ಭಕ್ತ ಅಂಬರೀಶ-ನರಕಾಸುರ ವಧೆ” ಯಕ್ಷಗಾನ ಬಯಲಾಟ ಜರಗಿತು.