ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಶುಕ್ರವಾರ ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರು ಖಂಡಿತವಾಗಿಯೂ ಮತ್ತೆ ಅಮೇಥಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ" ಎಂದು ಇತ್ತೀಚಿಗೆ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ರೈ ವಾರಣಾಸಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
2004 ರಿಂದ ಅಮೇಥಿ ಸಂಸದರಾಗಿದ್ದ ರಾಹುಲ್ ಗಾಂಧಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದರು.
ಶುಕ್ರವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಯಸಿದರೆ ವಾರಣಾಸಿ ಅಥವಾ ರಾಜ್ಯದ ಇನ್ನಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಅವರಿಗೆ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವ ಹಂಬಲವಿದ್ದರೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಅವರಿಗಾಗಿ ಮನಃಪೂರ್ವಕವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮೇಲ್ಜಾತಿಯ ಅಜಯ್ ರೈ ಅವರನ್ನು ಯುಪಿ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.