ನವದೆಹಲಿ: ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಫುಟಿನ್ ಪಾಲ್ಗೊಳ್ಳುತ್ತಿಲ್ಲ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದೂರವಾಣಿ ಮಾತುಕತೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಉಭಯ ನಾಯಕರು ದೂರವಾಣಿ ಮಾತುಕತೆ ವೇಳೆ, ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳ ಪ್ರಗತಿ ಕುರಿತು ಪರಿಶೀಲಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆ ಸೇರಿದಂತೆ ಪರಸ್ಪರ ಕಾಳಜಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸದಿರುವುದಕ್ಕೆ ಕಾರಣವನ್ನು ಅಧ್ಯಕ್ಷ ಪುಟಿನ್ ತಿಳಿಸಿದರು. ರಷ್ಯಾದ ನಿರ್ಧಾರ ಕುರಿತು ಅರ್ಥ ಮಾಡಿಕೊಂಡ ಪ್ರಧಾನಿ ಮೋದಿ, ಭಾರತ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಎಲ್ಲಾ ಕಾರ್ಯಕ್ರಮಗಳಿಗೆ ರಷ್ಯಾದ ನಿರಂತರ ಬೆಂಬಲಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು. ಉಭಯ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.