ತ್ರಿಶೂರ್: ಮಾಜಿ ಸಚಿವ ಹಾಗೂ ಶಾಸಕ, ಸಿಪಿಎಂ ಮುಖಂಡ ಎಸಿ ಮೊಯ್ತೀನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ಅಂತ್ಯಗೊಂಡಿದೆ.
22 ಗಂಟೆಗಳ ಸುದೀರ್ಘ ದಾಳಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅಂತ್ಯಗೊಂಡಿದೆ. ಕರುವನ್ನೂರು ಸಹಕಾರಿ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈ ತಪಾಸಣೆ ನಡೆಸಿತ್ತು ಎಂದು ಎಸಿ ಮೊಯ್ತೀನ್ ಹೇಳಿಕೆ ನೀಡಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ ಅವರು, ಇಡಿ ತಂಡ ತನ್ನ, ಪತ್ನಿ ಹಾಗೂ ಮಗಳ ಬ್ಯಾಂಕ್ ಖಾತೆ ದಾಖಲೆಗಳನ್ನು ಪರಿಶೀಲಿಸಿದೆ ಎಂದಿರುವರು.
ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಗಳನ್ನು ಬಂಧಿಸುವುದು ಇಡಿ ತಂಡದ ಕ್ರಮವಾಗಿರಬೇಕು, ಹೊರತು ಶಂಕಿತರನ್ನು ಬೇಟೆಯಾಡುವುದು ಸರಿಯಲ್ಲ ಎಂದು ಮೊಯ್ತೀನ್ ಆರೋಪಿಸಿದ್ದಾರೆ. ಕರುವನ್ನೂರು ಬ್ಯಾಂಕ್‍ನಿಂದ ಸಾಲ ಪಡೆಯಲು ನಾನು ಸಹಾಯಧನವನ್ನು ಬೇರೆಯವರಿಗೆ ವರ್ಗಾಯಿಸಿದ್ದೇನೆ ಎಂಬ ಇರಿಂಞಲಕುಡದವರೊಬ್ಬರು ನೀಡಿದ ಹೇಳಿಕೆ ಆಧರಿಸಿ ಈ ದಾಳಿ ನಡೆದಿದೆ. ಯಾವುದೇ ವಿಚಾರಣೆಗೆ ಸಹಕರಿಸುತ್ತೇನೆ. ಸದ್ಯ ಭಯಪಡುವ ಪರಿಸ್ಥಿತಿ ಇಲ್ಲ ಎಂದು ಮೊಯ್ತೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನಿಖಾ ತಂಡ ಮನೆಯ ಮೂಲೆ ಮೂಲೆಗಳನ್ನು ಶೋಧಿಸಿದೆ. ತನಿಖಾ ತಂಡದ ಕೋರಿಕೆಯಂತೆ ಮನೆ ದಾಖಲೆ, ಸಾಲದ ದಾಖಲೆ, ಆಸ್ತಿ ಸಂಬಂಧಿತ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಬ್ಯಾಂಕ್ ಖಾತೆಯ ಮಾಹಿತಿಯನ್ನು ಕಚೇರಿಗೆ ತಲುಪಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮೊಯ್ತೀನ್ ತಿಳಿಸಿದ್ದಾರೆ.