ನವದೆಹಲಿ: ಗಣನೀಯ ಸೇವೆ ಸಲ್ಲಿಸಿದ 954 ಸಿಬ್ಬಂದಿಗೆ ರಾಷ್ಟ್ರಪತಿಯವರ ಪೊಲೀಸ್ ಪದಕವನ್ನು ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಸೋಮವಾರ ಘೋಷಿಸಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಎಲ್. ಇಬೊಮ್‌ಚಾ ಸಿಂಗ್ ಅವರು ಈ ಬಾರಿ ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪದಕ (PPMG) ಪಡೆದ ಏಕೈಕ ಸಿಬ್ಬಂದಿಯಾಗಿದ್ದಾರೆ.
ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪದಕ ಹಾಗೂ ಪೊಲೀಸ್ ಶೌರ್ಯ ಪದಕಕ್ಕೆ ಕರ್ನಾಟಕದ ಯಾವೊಬ್ಬ ಸಿಬ್ಬಂದಿಯೂ ಆಯ್ಕೆಯಾಗಿಲ್ಲ. ಆದರೆ, ವಿಶಿಷ್ಟ ಸೇವೆಗಾಗಿನ ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಇಬ್ಬರು ಮತ್ತು ಶ್ಲಾಘನೀಯ ಸೇವೆಗಾಗಿ 18 ಮಂದಿ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಶೌರ್ಯ ಪದಕಕ್ಕೆ ಆಯ್ಕೆಯಾದವರ ಪೈಕಿ 125 ಸಿಬ್ಬಂದಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, 71 ಸಿಬ್ಬಂದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ 11 ಮಂದಿ ಈಶಾನ್ಯ ರಾಜ್ಯಗಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.
ಪೊಲೀಸ್ ಶೌರ್ಯ ಪದಕ ಪಡೆದವರಲ್ಲಿ ಹೆಚ್ಚಿನವರು (55 ಮಂದಿ) ಜಮ್ಮು ಮತ್ತು ಕಾಶ್ಮೀರ ಪೊಲೀಸರು. ಉಳಿದಂತೆ ಮಹಾರಾಷ್ಟ್ರದ 33 ಸಿಬ್ಬಂದಿ, ಸಿಆರ್‌ಪಿಎಫ್‌ನ 28 ಸಿಬ್ಬಂದಿ, ಛತ್ತೀಸಗಢದ 24 ಸಿಬ್ಬಂದಿ, ತೆಲಂಗಾಣದ 22 ಸಿಬ್ಬಂದಿ ಹಾಗೂ ಆಂಧ್ರಪ್ರದೇಶದ 18 ಸಿಬ್ಬಂದಿ ಇದ್ದಾರೆ.
ಬಿಎಸ್‌ಎಫ್‌ನ ನಾಲ್ವರು ಪೊಲೀಸ್ ಶೌರ್ಯ ಪದಕ ಹಾಗೂ ಐವರು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಯವರ ಪೊಲೀಸ್ ಪದಕ ಪಡೆದಿದ್ದಾರೆ. ಶ್ಲಾಘನೀಯ ಸೇವೆಗಾಗಿ 46 ಮಂದಿ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಸಿಬಿಐನ 6 ಮಂದಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಯವರ ಪೊಲೀಸ್ ಪದಕ ಮತ್ತು ಶ್ಲಾಘನೀಯ ಸೇವೆಗಾಗಿ 46 ಮಂದಿ ಪೊಲೀಸ್ ಪದಕ ಪಡೆದಿದ್ದಾರೆ.
2022ರಲ್ಲಿ 347 ಸಿಬ್ಬಂದಿ ಪೊಲೀಸ್ ಶೌರ್ಯ ಪದಕ ಪಡೆದಿದ್ದರಾದರೂ ಯಾರೊಬ್ಬರಿಗೂ ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪದಕ ಲಭಿಸಿರಲಿಲ್ಲ. ವಿಶಿಷ್ಟ ಸೇವೆ ಸಲ್ಲಿಸಿದ 87 ಸಿಬ್ಬಂದಿಯನ್ನು ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ, ಶ್ಲಾಘನೀಯ ಸೇವೆ ಸಲ್ಲಿಸಿದ 648 ಸಿಬ್ಬಂದಿಯನ್ನು ಪೊಲೀಸ್ ಪದಕಕ್ಕೆ ಆಯ್ಕೆ ಮಾಡಲಾಗಿತ್ತು.