ನವದೆಹಲಿ (PTI): ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸು ಕಡಿಮೆ ಮಾಡಲು ಶುಕ್ರವಾರ ಸಲಹೆ ನೀಡಿರುವ ಸಂಸದೀಯ ಸಮಿತಿ, ಇದು ಯುವ ಜನರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡುತ್ತದೆ ಎಂದು ಹೇಳಿದೆ.
ರಾಷ್ಟ್ರೀಯ ಚುನಾವಣೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯಸ್ಸನ್ನು ಪ್ರಸ್ತುತ 25 ವರ್ಷದಿಂದ 18ಕ್ಕೆ ಇಳಿಸಲು ಬಿಜೆಪಿಯ ಸುಶೀಲ್ ಮೋದಿ ನೇತೃತ್ವದ ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಕೆನಡಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಂತಹ ವಿವಿಧ ದೇಶಗಳಲ್ಲಿ ಪರಿಶೀಲಿಸಿದ ಬಳಿಕ, ರಾಷ್ಟ್ರೀಯ ಚುನಾವಣೆಗಳಲ್ಲಿ ಉಮೇದುವಾರಿಕೆಗೆ ಕನಿಷ್ಠ ವಯಸ್ಸು 18 ವರ್ಷ ಇರಬೇಕು. ಕನಿಷ್ಠ ವಯಸ್ಸಿನ ಅಗತ್ಯ ಕಡಿಮೆ ಮಾಡುವುದರಿಂದ ಯುವಜನರು ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಕಾನೂನು ಚೌಕಟ್ಟಿನ ಪ್ರಕಾರ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ಆಗಿರಬೇಕು. ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಲು ಕನಿಷ್ಠ ವಯಸ್ಸು 30 ವರ್ಷ. ಮತದಾರರಾಗಿ ನೋಂದಾಯಿಸಲು 18 ವರ್ಷ ಆಗಿರಬೇಕು.
ಚುನಾವಣಾ ಆಯೋಗದ ಪ್ರಕಾರ, ಸಂವಿಧಾನದ ನಿಬಂಧನೆ ಬದಲಿಸಲು ಬಲವಾದ ಕಾರಣಗಳು ಇಲ್ಲವಾದರೆ ಅದು ಬದಲಾಗದೆ ಉಳಿಯಬೇಕು.
ಸಂಸತ್ತು, ರಾಜ್ಯ ಶಾಸಕಾಂಗ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮತದಾನ ಮಾಡಲು ಮತ್ತು ಸ್ಪರ್ಧಿಸಲು ಕನಿಷ್ಠ ವಯಸ್ಸು ನಿಗದಿಪಡಿಸುವ ವಿಷಯವನ್ನು ಆಯೋಗ ಈಗಾಗಲೇ ಪರಿಗಣಿಸಿದೆ ಮತ್ತು 18 ವರ್ಷ ವಯಸ್ಸಿನವರು ಈ ಜವಾಬ್ದಾರಿಗೆ ಅಗತ್ಯ ಅನುಭವ ಮತ್ತು ಪ್ರಬುದ್ಧತೆ ಹೊಂದಿರುತ್ತಾರೆ ಎಂದು ನಿರೀಕ್ಷಿಸುವುದು ಅವಾಸ್ತವಿಕವಾಗಿದೆ.
ಆದ್ದರಿಂದ, ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸು ಸೂಕ್ತವಾಗಿದೆ. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯತ್ವದ ವಯಸ್ಸಿನ ಅವಶ್ಯಕತೆಯನ್ನು ಕಡಿಮೆ ಮಾಡಲು ಆಯೋಗವು ಒಲವು ಹೊಂದಿಲ್ಲ ಎಂದು ಸಮಿತಿ ಹೇಳಿದೆ.
ರಾಜಕೀಯದಲ್ಲಿ ತೊಡಗಿಸಿಕೊಳ್ಳುವಿಕೆಗೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳೊಂದಿಗೆ ಯುವಜನರನ್ನು ಸಜ್ಜುಗೊಳಿಸಲು ಸಮಗ್ರ ನಾಗರಿಕ ಶಿಕ್ಷಣ ಕಾರ್ಯಕ್ರಮ ಒದಗಿಸಲು ಚುನಾವಣಾ ಆಯೋಗ ಮತ್ತು ಸರ್ಕಾರ ಆದ್ಯತೆ ನೀಡಬೇಕು ಎಂದು ಸಮಿತಿ ಸಲಹೆ ನೀಡಿದೆ.