ನವದೆಹಲಿ: 'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಪೈಕಿ ಶೇ 25ರಷ್ಟು ವಿದ್ಯಾರ್ಥಿಗಳಿಗೆ ಶಿಷ್ಯವೇತನ (ಸ್ಟೈಪೆಂಡ್) ಸಿಗುತ್ತಿಲ್ಲ' ಎನ್ನುವ ಅಂಶ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಮೀಕ್ಷೆಯಲ್ಲಿ (ಎನ್‌ಎಂಸಿ) ಗೊತ್ತಾಗಿದೆ.
ನವದೆಹಲಿ: 'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಪೈಕಿ ಶೇ 25ರಷ್ಟು ವಿದ್ಯಾರ್ಥಿಗಳಿಗೆ ಶಿಷ್ಯವೇತನ (ಸ್ಟೈಪೆಂಡ್) ಸಿಗುತ್ತಿಲ್ಲ' ಎನ್ನುವ ಅಂಶ ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಮೀಕ್ಷೆಯಲ್ಲಿ (ಎನ್‌ಎಂಸಿ) ಗೊತ್ತಾಗಿದೆ.
'ತಮ್ಮ ತಮ್ಮ ರಾಜ್ಯಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದೊರೆಯುವ ಸ್ಟೈಪೆಂಡ್ ಮೊತ್ತಕ್ಕೆ ಸಮನಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ಟೈಪೆಂಡ್ ದೊರೆಯುತ್ತಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 50ರಷ್ಟು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ' ಎಂದು ಗುರುವಾರ ಎನ್‌ಎಂಸಿ ಹಂಚಿಕೊಂಡಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಇಂಟರ್ನಿಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಕುರಿತು ಎನ್‌ಎಂಸಿ ಗೂಗಲ್ ಫಾರ್ಮ್‌ಗಳ ಮೂಲಕ ಆನ್‌ಲೈನ್ ಸಮೀಕ್ಷೆಯನ್ನು ನಡೆಸಿತ್ತು.
ಸಮೀಕ್ಷೆಯಲ್ಲಿ ಒಟ್ಟು 10,178 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ 7,901 ವಿದ್ಯಾರ್ಥಿಗಳು 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೇರಿದವರಾಗಿದ್ದಾರೆ. 7,901 ವಿದ್ಯಾರ್ಥಿಗಳ ಪೈಕಿ 2,110 ವಿದ್ಯಾರ್ಥಿಗಳು ತಮಗೆ ಸ್ಟೈಪೆಂಡ್ ಸಿಗುತ್ತಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. 4,288 ವಿದ್ಯಾರ್ಥಿಗಳು ತಮಗೆ ತಮ್ಮ ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದೊರೆಯುವಷ್ಟು ಸಮಾನ ಮೊತ್ತದ ಸ್ಟೈಪೆಂಡ್ ಸಿಗುತ್ತಿಲ್ಲ ಎಂದು ದೂರಿದ್ದಾರೆ. ತಮಗೆ ದೊರೆತ ಸ್ಟೈಪೆಂಡ್ ಅನ್ನು ತಾವು ಓದುವ ಖಾಸಗಿ ಕಾಲೇಜುಗಳು ಅಥವಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಾವೇ ಇಟ್ಟುಕೊಳ್ಳುತ್ತಿವೆ ಎಂದೂ 1,228 ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಉಳಿದ ಪ್ರತಿಕ್ರಿಯೆಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳು, ರಾಷ್ಟ್ರೀಯ ಮಂಡಳಿಯ ಡಿಪ್ಲೊಮಾ ಕಾಲೇಜುಗಳ ವಿದ್ಯಾರ್ಥಿಗಳಿದ್ದಾಗಿದೆ. ಈ ಪೈಕಿ ಕೆಲವು ನಕಲಿ ಪ್ರತಿಕ್ರಿಯೆಗಳೂ ಇವೆ ಎಂದೂ ಎನ್‌ಎಂಸಿಯ ಸಲಹಾ ಮಂಡಳಿಯು ಹೇಳಿದೆ.