ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ 'ಇಸ್ರೋ'ದ ಅಧ್ಯಕ್ಷ ಸೋಮನಾಥ್ ಸೇರಿದಂತೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆ.26ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ 'ಇಸ್ರೋ'ದ ಅಧ್ಯಕ್ಷ ಸೋಮನಾಥ್ ಸೇರಿದಂತೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆ.26ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಗುರುವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ರೋಡ್ ಶೋ ಆಯೋಜನೆ ಮಾಡಲಾಗುತ್ತದೆ. ಚಂದ್ರಯಾನ-3ಗೆ ಸರಿಸಾಟಿಯಾದ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಈ ಸಾಧನೆಯಿಂದ ನಮಗೆಲ್ಲ ಬಹಳ ಹೆಮ್ಮೆ ಇದೆ' ಎಂದು ಬಣ್ಣಿಸಿದರು.
ಆ.26ಕ್ಕೆ ನಗರದ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತಿದ್ದೇವೆ. ಅವರ ಸ್ವಾಗತಕ್ಕೆ 5 ಸಾವಿರ ಜನ ಸೇರುತ್ತೇವೆ. ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ ಎಂದು ಅಶೋಕ್ ಹೇಳಿದರು.
ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀ ವರೆಗೆ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ ಎಂದು ಅಶೋಕ್ ಮಾಹಿತಿ ನೀಡಿದರು.
ಸಂಚಾರ ಮಾರ್ಪಾಡು: ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ಆ.26ರ ಬೆಳಗಿನಜಾವ 4:30ರಿಂದ ಬೆಳಗ್ಗೆ 9:30ರ ವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ಯಶವಂತಪುರ ಪ್ಲೈ ಓವರ್, ತುಮಕೂರು ರಸ್ತೆಯಲ್ಲಿ (ಯಶವಂತಪುರದಿಂದ ನಾಗಸಂದ್ರದ ವರೆಗೆ) ಸೇರಿದಂತೆ ಆ ಭಾಗದ ವಿವಿಧ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.