ಚಂಡೀಗಢ: ವಿಶ್ವ ಹಿಂದೂ ಪರಿಷತ್ ಆಗಸ್ಟ್ 28ರಂದು ತಮ್ಮ ಬ್ರಿಜ್ ಮಂಡಲ್ ಜಲ ಅಭಿಷೇಕ್ ಯಾತ್ರೆಯನ್ನು ಮುಂದುವರಿಸುವುದಾಗಿ ಹೇಳಿದ ನಂತರ ಹರಿಯಾಣದ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್ಎಂಎಸ್ ಸೇವೆಗಳನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಆಗಸ್ಟ್ 28ರ ಮಧ್ಯರಾತ್ರಿ 12 ಗಂಟೆವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ.
ಆಗಸ್ಟ್ 28 ರಂದು ಬ್ರಿಜ್ ಮಂಡಲ್ ಜಲ ಅಭಿಷೇಕ್ ಯಾತ್ರೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ತು ಆಗಸ್ಟ್ 13ರಂದು ಹೇಳಿತ್ತು.
ಆದಾಗ್ಯೂ, ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ವ್ಯಕ್ತಪಡಿಸಿದ ಕಾನೂನು ಮತ್ತು ಸುವ್ಯವಸ್ಥೆ ಭಂಗದ ಆತಂಕದ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರದ ಅಧಿಕಾರಿಗಳು ಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆ.
ಈ ಹಿಂದೆ, ಜುಲೈ 31ರಂದು ನುಹ್‌ನಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ನುಹ್ ಆಡಳಿತವು ಇಂಟರ್ನೆಟ್ ಮತ್ತು SMS ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ನುಹ್ ಡೆಪ್ಯುಟಿ ಕಮಿಷನರ್ ಶುಕ್ರವಾರ ರಾಜ್ಯದ ಗೃಹ ಇಲಾಖೆಗೆ ಪತ್ರ ಬರೆದಿದ್ದು, ನುಹ್ ಇಂಟರ್ನೆಟ್ ಸೇವೆಯನ್ನು ನಿಲ್ಲಿಸುವಂತೆ ಶಿಫಾರಸು ಮಾಡಿದ್ದಾರೆ. ಇದರ ನಂತರ ಹರಿಯಾಣದ ಗೃಹ ಕಾರ್ಯದರ್ಶಿ ಆಗಸ್ಟ್ 26 ರಿಂದ ಆಗಸ್ಟ್ 28ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಇಂದು ಆದೇಶ ಹೊರಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 13ರಂದು, ಪಂಚಾಯತ್ ಸಮಿತಿಯ ಸದಸ್ಯ ರತ್ತನ್ ಸಿಂಗ್ ಮಾತನಾಡಿ, 'ಧಾರ್ಮಿಕ ಸಂಘಟನೆಗಳು ತಮ್ಮ ಯಾತ್ರೆ ಪೂರ್ಣಗೊಂಡಿಲ್ಲ ಮತ್ತು ಆಗಸ್ಟ್ 28ರಂದು ಅದನ್ನು ಪುನರಾರಂಭಿಸಲು ಬಯಸುತ್ತವೆ ಎಂದು ಪಂಚಾಯತ್‌ಗೆ ತಿಳಿಸಿವೆ. ಅದರಂತೆ ಪಂಚಾಯತ್ ಅವರ ಬೇಡಿಕೆಗೆ ಸಮ್ಮತಿಸಿದೆ ಮತ್ತು ಅವರಿಗೆ ಬೆಂಬಲ ನೀಡಿದೆ' ಎಂದು ಹೇಳಿದರು.
'ಸಾಮಾನ್ಯವಾಗಿ ಇಂತಹ ಯಾತ್ರೆ ಆರಂಭಕ್ಕೂ ಮುನ್ನ ಅನುಮತಿ ಪಡೆಯಲಾಗುತ್ತದೆ. ಅನುಮತಿ ಪಡೆದರೆ ನಮ್ಮ ಭದ್ರತೆಯನ್ನು ಖಾತರಿಪಡಿಸುವುದು ಪೊಲೀಸರ ಜವಾಬ್ದಾರಿಯಾಗುತ್ತದೆ’ ಎಂದು ಪಂಚಾಯಿತಿ ಸದಸ್ಯರು ಹೇಳಿದರು.