ನವದೆಹಲಿ: ದೆಹಲಿಯ ಸರ್ಕಾರಿ ಅಧಿಕಾರಿಯಿಂದ ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾದ ಅಪ್ರಾಪ್ತ ಬಾಲಕಿಯನ್ನು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಭೇಟಿಗೆ ನಿರಾಕರಿಸಿರುವುದರಿಂದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇಂದು ಕೂಡಾ ತಮ್ಮ ಧರಣಿಯನ್ನು ಮುಂದುವರೆಸಿದ್ದಾರೆ.
ಬಾಲಕಿ ಭೇಟಿಯಾಗದಂತೆ ತಡೆಯಲಾಗಿದೆ ಎಂದು ಆರೋಪಿಸಿ ಮಲಿವಾಲ್ ಸೋಮವಾರ ಬೆಳಗ್ಗೆ ಧರಣಿ ಕುಳಿತಿದ್ದರು. ಆದಾಗ್ಯೂ, ಸಂತ್ರಸ್ತೆ ಇನ್ನೂ ವೀಕ್ಷಣೆಯಲ್ಲಿರುವುದರಿಂದ ಬಾಲಕಿಯ ತಾಯಿ ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮೋದಯ್ ಖಾಖಾ ನವೆಂಬರ್ 2020 ಮತ್ತು ಜನವರಿ 2021 ರ ನಡುವೆ ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದು, ಗರ್ಭಪಾತಕ್ಕಾಗಿ ಆತನ ಪತ್ನಿ ಬಾಲಕಿಗೆ ಔಷಧಿ ನೀಡಿದ್ದಾಳೆ ಎನ್ನಲಾಗಿದೆ. ಖಾಖಾ ಮತ್ತು ಅವರ ಪತ್ನಿ ಸೀಮಾ ರಾಣಿ ಅವರನ್ನು ಸೋಮವಾರ ಬಂಧಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾತಿ ಮಲಿವಾಲ್, ನಿನ್ನೆ ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ಬಂದಿದ್ದು, ಸಂತ್ರಸ್ತೆ ಅಥವಾ ಆಕೆಯ ತಾಯಿಯನ್ನು ಭೇಟಿ ಮಾಡಲು ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ. ರಾತ್ರಿಯನ್ನು ಇಲ್ಲಿಯೇ ಕಳೆದಿದ್ದೇನೆ. ಅವರನ್ನು ಭೇಟಿಯಾಗಲು ಪೊಲೀಸರು ಏಕೆ ಅನುಮತಿಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದರು.
ಆಯೋಗವು ದೆಹಲಿ ಪೋಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸೇವಾ ಇಲಾಖೆಗಳಿಗೆ ನೋಟಿಸ್ ಕಳುಹಿಸಿದ್ದು, ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದೆ ಮತ್ತು ಮುಂದಿನ ಕ್ರಮಕ್ಕಾಗಿ ಅಪ್ರಾಪ್ತೆ ಬಾಲಕಿ ಮತ್ತು ಆಕೆಯ ತಾಯಿಯನ್ನು ಭೇಟಿ ಮಾಡುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ತದನಂತರ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, ನಾನು ಬಾಲಕಿಯನ್ನು ಭೇಟಿಯಾಗಲು ಬರದಿದ್ದರೆ, ಆಕೆ ನೋಡಲು ಬರಲಿಲ್ಲ ಎನ್ನುತ್ತಿದ್ದರು. ಈಗ ನಾನು ಇಲ್ಲಿರುವಾಗ ನಾಟಕ ಎಂದು ಹೇಳುತ್ತಿದ್ದಾರೆ. ರಾಜಕಾರಣಿಗಳು ಸತ್ಯ ಮಾತನಾಡಲಾರದಷ್ಟು ಮಟ್ಟಕ್ಕೆ ಕುಸಿದಿದ್ದಾರೆ ಎಂದಿದ್ದಾರೆ.
ಆರೋಪಿ ಅಧಿಕಾರಿಯನ್ನು ಅಮಾನತು ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು. ಆದೇಶದ ಪ್ರಕಾರ, ಅಮಾನತು ಅವಧಿಯಲ್ಲಿ, ಅಧಿಕಾರಿಯು ಪೂರ್ವಾನುಮತಿ ಪಡೆಯದೆ ಇಲಾಖಾ ಪ್ರಧಾನ ಕಚೇರಿಯಿಂದ ಹೊರಬರಲು ಅನುಮತಿ ಇಲ್ಲ.