ಶ್ರೀಹರಿಕೋಟಾ: ಚಂದ್ರಯಾನ–3ರ ಎರಡನೆಯ ಮತ್ತು ಕೊನೆಯ ಡಿ– ಬೂಸ್ಟಿಂಗ್ ಕಾರ್ಯ (ಲ್ಯಾಂಡರ್‌ನ ವೇಗ ತಗ್ಗಿಸುವ ಪ್ರಕ್ರಿಯೆ) ಇಂದು (ಭಾನುವಾರ) ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಚಂದ್ರಯಾನ 3 ನೌಕೆಯ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಆಗುವ ದಿನಾಂಕ ಘೋಷಣೆ ಮಾಡಿದೆ.
ನೌಕೆಯು ಚಂದ್ರನ ಅಂತಿಮ ಕಕ್ಷೆಯನ್ನು ತಲುಪಿದ್ದು, ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಆಗಬೇಕಿದೆ. ಇದಕ್ಕೆ ಇದೀಗ ಇಸ್ರೋ ಮುಹೂರ್ತ ನಿಗದಿಪಡಿಸಿದ್ದು, ಆಗಸ್ಟ್ 23 ಬುಧವಾರ ಸಂಜೆ 6:04 ಕ್ಕೆ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.
ಪ್ರಸ್ತುತ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪವಿರುವ ಬಿಂದು 25 ಕಿಮೀ ಮತ್ತು ಚಂದ್ರನಿಂದ 134 ಕಿಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತದೆ ಎಂದು ಇಸ್ರೊ ಹೇಳಿದೆ.
ಎರಡನೇ ಮತ್ತು ಅಂತಿಮ ಡಿ–ಬೂಸ್ಟಿಂಗ್ ಕಾರ್ಯಾಚರಣೆಯು ಚಂದ್ರನ ಕಕ್ಷೆಯನ್ನು 25 km x 134 km ನಷ್ಟು ಸನಿಹಕ್ಕೆ ತಲುಪಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ನಿರ್ದಿಷ್ಟಪಡಿಸಿದ ಲ್ಯಾಂಡಿಂಗ್ ಸೈಟ್‌ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತಿದೆ. ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯು ಆಗಸ್ಟ್ 23, 2023 ರಂದು ಬೆಳಿಗ್ಗೆ ಸ್ಥಳೀಯ ಕಾಲಮಾನ 17.45 ಗಂಟೆಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಲ್ಯಾಂಡರ್ ವಿಕ್ರಮ್ ಸ್ವಯಂಚಾಲಿತ ಕ್ರಮದಲ್ಲಿ ಚಂದ್ರನ ಕಕ್ಷೆಯಲ್ಲಿ ಇಳಿಯುತ್ತಿದೆ; ಹೇಗೆ ಹೋಗಬೇಕೆಂದು ಅದು ತಾನಾಗಿಯೇ ನಿರ್ಧರಿಸುತ್ತದೆ ಎಂದು ಇಸ್ರೊ ಟ್ವಿಟರ್ ನಲ್ಲಿ ತಿಳಿಸಿದೆ.
25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ. ಚಂದ್ರನ ಮೇಲೆ ಲ್ಯಾಂಡಿಂಗ್ ಹೇಗೆ?
ಈ ಬಾರಿ ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್ ತನಗಾಗಿ ಸರಿಯಾದ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತದೆ. ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಎಂಬುದನ್ನು ನೋಡಬಹುದು.