ನವದೆಹಲಿ: ಮುಂಬರುವ ದಿನಗಳಲ್ಲಿ ಟೊಮೆಟೊ ಬೆಲೆ ಕೆ.ಜಿಗೆ ₹300ಕ್ಕೆ ತಲುಪುವ ಸಂಭವವಿದ್ದು, ತರಕಾರಿ ಬೆಲೆಯೂ ಏರಿಕೆಯಾಗುತ್ತದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹160 ಇದ್ದ ಟೊಮೆಟೊ ಬೆಲೆ ₹200ಗೆ ಏರಿಕೆಯಾಗಿದ್ದು, ಚಿಲ್ಲರೆ ಬೆಲೆಯೂ ಹೆಚ್ಚಾಗಬಹುದು ಎಂದು ಅವರು ತಿಳಿಸಿದರು.
ಮದರ್ ಡೈರಿಯು ಅಡುಗೆ ಮನೆಯ ಪ್ರಮುಖ ತರಕಾರಿಯಾದ ಟೊಮೆಟೊವನ್ನು ಕೆ.ಜಿ ₹259ಕ್ಕೆ ಮಾರಾಟ ಮಾಡಲು ಪ್ರಾರಂಭಿಸಿದೆ.
ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಕಾರಣ ಟೊಮೆಟೊ ಬೆಲೆಯಲ್ಲಿ ಒಂದು ತಿಂಗಳಿನಿಂದ ಭಾರಿ ಏರಿಕೆ ಉಂಟಾಗಿದೆ.
'ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಭಾರಿ ಮಳೆಯಿಂದಾಗಿ ತರಕಾರಿ ಸಾಗಣೆಗೆ ಬಹಳ ತೊಂದರೆಯಾಗಿದೆ. ಉತ್ಪಾದಕರಿಂದ ತರಕಾರಿ ರಫ್ತು ಮಾಡಿಕೊಳ್ಳಲು ವಾಡಿಕೆಗಿಂತ 6 ರಿಂದ 8 ಗಂಟೆಗಳು ಹೆಚ್ಚು ತೆಗೆದುಕೊಳ್ಳುತ್ತದೆ. ಇದರಿಂದಾಗಿ ಟೊಮೆಟೊ ಬೆಲೆ ಕೆ.ಜಿಗೆ ಸುಮಾರು ₹300 ಆಗಲಿದೆ ಎಂದು ಆಜಾದ್‌ಪುರ ಮಂಡಿ ಸಗಟು ವ್ಯಾಪಾರಿ ಸಂಜಯ್ ಭಗತ್ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ರಫ್ತು ಮಾಡುತ್ತಿರುವ ಟೊಮೆಟೊ ಮತ್ತು ಇತರ ತರಕಾರಿಗಳ ಗುಣಮಟ್ಟ ಕುಸಿದಿದೆ ಎಂದು ಅವರು ಹೇಳಿದರು. ಹಿಮಾಚಲ ಪ್ರದೇಶದಲ್ಲಿ ಜುಲೈನಲ್ಲಿ ಭಾರಿ ಮಳೆಯಾಗಿದ್ದು, ಬೆಳೆ ಹಾನಿ ಉಂಟಾಗಿದೆ.
ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ಜುಲೈ 14 ರಿಂದ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಲ್ಲರೆ ಬೆಲೆಯೂ ಇಳಿಕೆ ಕಂಡಿತ್ತು. ಆದರೆ, ಟೊಮೆಟೊ ಕೊರತೆಯಿಂದಾಗಿ ಮತ್ತೆ ಬೆಲೆ ಏರಿಕೆ ಕಂಡಿದೆ.
ಟೊಮೆಟೊ ಚಿಲ್ಲರೆ ಬೆಲೆಯೂ ಬುಧವಾರ ಕೆ.ಜಿಗೆ ₹ 203ಕ್ಕೆ ತಲುಪಿದೆ. ಆದರೆ, ಮದರ್ ಡೈರಿಯ ಸಫಲ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರತಿ ಕೆ.ಜಿಗೆ ₹ 259 ಇದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
'ಹವಾಮಾನ ವೈಪರೀತ್ಯಗಳಿಂದಾಗಿ ಕಳೆದ ಎರಡು ತಿಂಗಳಿಂದ ದೇಶಾದ್ಯಂತ ಟೊಮೆಟೊ ಪೂರೈಕೆಗೆ ಬಹಳ ತೊಂದರೆಯಾಗಿದೆ. ಕಳೆದ ಎರಡು ದಿನಗಳಲ್ಲಿ, ದೆಹಲಿಯ ಆಜಾದ್‌ಪುರಕ್ಕೆ ತರಕಾರಿಗಳ ಆಗಮನವೂ ತೀವ್ರವಾಗಿ ಕುಸಿದಿದೆ. ಪೂರೈಕೆಯ ಕೊರತೆಯಿಂದಾಗಿ, ಸಗಟು ಮಾರಾಟದಲ್ಲಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಚಿಲ್ಲರೆ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಮದರ್ ಡೈರಿ ವಕ್ತಾರರು ಹೇಳಿದ್ದಾರೆ.