ನವದೆಹಲಿ: ಮುಂಬೈನಲ್ಲಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ INDIA ಮೈತ್ರಿಕೂಟದ ಮೂರನೇ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಪಾಲ್ಗೊಳ್ಳಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.
'ನಾವು ಮುಂಬೈಗೆ ಹೋಗುತ್ತೇವೆ ಮತ್ತು ಸಭೆಯಲ್ಲಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಬಗ್ಗೆ ನಿಮಗೆ ತಿಳಿಸುತ್ತೇವೆ' ಎಂದು ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ದೆಹಲಿಯಲ್ಲಿ ಬುಧವಾರ (ಆ.16) ಚುನಾವಣೆ ಸಿದ್ಧತೆ ಬಗ್ಗೆ ಕಾಂಗ್ರೆಸ್ ನಾಯಕರ ಸಭೆ ನಡೆದಿತ್ತು. ಬಳಿಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇವೆ. ಎಎಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಭೆ ಬಳಿಕ ಕಾಂಗ್ರೆಸ್ ವಕ್ತಾರರಾದ ಅಲ್ಕಾ ಲಂಬಾ ಘೋಷಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಎಪಿ ಒಂದು ವೇಳೆ ಕಾಂಗ್ರೆಸ್ ಈ ಹಾದಿ ತುಳಿದರೆ, INDIA ಮೈತ್ರಿ ಕೂಟದ ಮುಂದಿನ ಸಭೆಯಿಂದ ಹೊರಗುಳಿಯುವುದಾಗಿ ಹೇಳಿತ್ತು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಅಂತಹ ಯಾವುದೇ ವಿಷಯವನ್ನು ಚರ್ಚಿಸಿಲ್ಲ ಎಂದು ಕಾಂಗ್ರೆಸ್‌ನ ದೆಹಲಿ ಉಸ್ತುವಾರಿ ದೀಪಕ್ ಬಬಾರಿಯಾ ಸ್ಪಷ್ಟಪಡಿಸಿದಾಗ ಈ ಬಿಕ್ಕಟ್ಟು ಶಮನಗೊಂಡಿತು. ಇದಾದ ಬಳಿಕ ಕೇಜ್ರಿವಾಲ್ ಮೈತ್ರಿಕೂಟದ ಮೂರನೇ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಚುನಾವಣಾ ಭಾಷಣಗಳಲ್ಲಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ವಿರುದ್ಧವೂ ಬಹಿರಂಗವಾಗಿ ವಾಗ್ಧಾಳಿ ನಡೆಸಿದ್ದರು. ಇದು ಕೂಡ ಟೀಕೆಗೆ ಒಳಗಾಗಿತ್ತು.
ಮಧ್ಯ ಪ್ರದೇಶದ ಸಾತ್ನಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, 'ರಾಜ್ಯದ ಜನರು ಕಳೆದ 75 ವರ್ಷಗಳಿಂದ ಈ ಎರಡು ಪಕ್ಷಗಳಿಂದ (ಕಾಂಗ್ರೆಸ್ ಮತ್ತು ಬಿಜೆಪಿ) ಬೇಸತ್ತಿದ್ದಾರೆ. ಇವುಗಳಲ್ಲಿ ಯಾವೊಂದು ಪಕ್ಷವೂ ರಾಜ್ಯದಲ್ಲಿ ವಿದ್ಯುತ್ ನೀಡಿಲ್ಲ. ನಿಮಗೆ ವಿದ್ಯುತ್ ಪೂರೈಕೆ ಬೇಕಾದರೆ, ಎಎಪಿಗೆ ಮತ ನೀಡಿ ಮತ್ತು ನಿಮಗೆ ಪವರ್ ಕಟ್ ಬೇಕಾದರೆ ಈ ಎರಡು ಪಕ್ಷಗಳಿಗೆ ಮತ ನೀಡಿ' ಎಂದಿದ್ದರು.
ಇಂಡಿಯಾ ಮೈತ್ರಿಕೂಟವು ತನ್ನ ಮೂರನೇ ಸಭೆಯನ್ನು ಮುಂಬೈನಲ್ಲಿ ನಡೆಸಲಿದೆ. ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ ವಿರುದ್ಧ ಕಾಂಗ್ರೆಸ್ ಬೆಂಬಲ ನೀಡದ ಕಾರಣ ಎಎಪಿ ಮೊದಲ ಸಭೆಗೆ ಹಾಜರಾಗಿರಲಿಲ್ಲ. ಕಾಂಗ್ರೆಸ್ ಬೆಂಬಲ ನೀಡುವುದಾಗಿ ಘೋಷಿಸಿದ ಬಳಿಕ ಎಎಪಿ ಬೆಂಗಳೂರಿನಲ್ಲಿ ಜುಲೈ 17-18 ರಂದು ಎರಡನೇ ಸಭೆಯಲ್ಲಿ ಪಾಲ್ಗೊಂಡಿತ್ತು. ಇದೀಗ ಮುಂಬೈನಲ್ಲಿ ನಡೆಯಲಿರುವ ಮೂರನೇ ಸಭೆಯಲ್ಲಿ ಭಾಗವಹಿಸಲು ಸಿದ್ಧವಾಗಿದೆ.