ನವದೆಹಲಿ: ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡ ಭಾರತೀಯ ಕೋಸ್ಟ್ ಗಾರ್ಡ್, ಸಂಭಾವ್ಯ ವಿಪತ್ತೊಂದನ್ನು ತಡೆಗಟ್ಟಿದೆ.
ಎನ್ಐಒ ಗೆ ಸೇರಿದ ಹಡಗೊಂದು ಇಂಜಿನ್ ವೈಫಲ್ಯ ಎದುರಿಸಿ, ಕಾರವಾರದ ಸಮೀಪ ಅಪಾಯಕಾರಿ ಪರಿಸ್ಥಿತಿಯಲ್ಲಿತ್ತು. ಅದನ್ನು ಕೋಸ್ಟ್ ಗಾರ್ಡ್ ಸುರಕ್ಷಿತವಾಗಿ ದಡಕ್ಕೆ ಎಳೆದು ತಂದಿದೆ.ಈ ಹಡಗಿನಲ್ಲಿ 8 ವಿಜ್ಞಾನಿಗಳು ಹಾಗೂ 36 ಸಿಬ್ಬಂದಿಗಳಿದ್ದರು. ಆರ್ ವಿ ಸಿಂಧು ಸಾಧನ ಹಡಗನ್ನು 03 ನಾಟ್ಸ್ ನ ವೇಗದಲ್ಲಿ ಎಳೆದು ತಂದು ದಡ ತಲುಪಿಸಲಾಗಿದೆ. ತೊಂದರೆಯ ಸಿಗ್ನಲ್ ಲಭ್ಯವಾದಾಗ ಹಡಗು ದಡದಿಂದ 20 ನಾಟಿಕಲ್ ಮೈಲುಗಳಷ್ಟು ದೂರವಿತ್ತು ಎಂದು ಐಸಿಜಿ ಹೇಳಿದೆ.
ಕರೆಯನ್ನು ಸ್ವೀಕರಿಸಿದ ನಂತರ, ಕೋಸ್ಟ್ ಗಾರ್ಡ್ ಹೆಚ್ಚಿನ ಆದ್ಯತೆಯ ರಕ್ಷಣಾ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಿತು, ಆ ಪ್ರದೇಶಕ್ಕೆ ನುರಿತ ತಂಡದೊಂದಿಗೆ ಹೆಚ್ಚು ಸುಧಾರಿತ ಹಡಗನ್ನು ರವಾನಿಸಿತು. ಐಸಿಜಿ ನೀಡಿರುವ ಮಾಹಿತಿಯ ಪ್ರಕಾರ, ಹಡಗಿನಲ್ಲಿ ಮೌಲ್ಯಯುತವಾದ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಡೇಟಾ ಇದ್ದಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಅದಷ್ಟೇ ಅಲ್ಲದೇ “ಇದಲ್ಲದೆ, ಪರಿಸರ ಸೂಕ್ಷ್ಮ ಕಾರವಾರ ಕರಾವಳಿ ತೀರಕ್ಕೆ ಹಡಗು ಸಾಮಿಪ್ಯದಲ್ಲಿದ್ದ ಪರಿಣಾಮ, ತೈಲ ಸೋರಿಕೆಯ ಅಪಾಯವೂ ಇತ್ತೆಂದು ಐಸಿಜಿ ಹೇಳಿದೆ.