ನವದೆಹಲಿ: ಸಂವಿಧಾನದ 370ನೇ ವಿಧಿಯಡಿ ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕ್ರಮವು 'ಸಾಂವಿಧಾನಿಕ ವಂಚನೆ' ಅಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಗುರುವಾರ ಪ್ರತಿಪಾದಿಸಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, 'ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವುದು ಅಗತ್ಯವಾಗಿತ್ತು.
ಸಂವಿಧಾನದ 370ನೇ ವಿಧಿಯಡಿ ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಪೀಠ ನಡೆಸಿತು.
'ವಿಶೇಷ ಸ್ಥಾನಮಾನ ಹಿಂಪಡೆಯಲು ಅನುಸರಿಸಿದ ಮಾರ್ಗ ಸಮಂಜಸವಾಗಿರಬೇಕು' ಎಂದು ಸಿಜೆಐ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟರಮಣಿ, 'ಈ ವಿಷಯದಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ. ಅರ್ಜಿದಾರರು ಆರೋಪಿಸಿರುವಂತೆ ಯಾವುದೇ ಸಾಂವಿಧಾನಿಕ ವಂಚನೆಯಾಗಿಲ್ಲ' ಎಂದರು.
'370ನೇ ವಿಧಿಯ ಕಲಂ 2ರಡಿ ಇದ್ದ 'ಸಂವಿಧಾನ ರಚನಾ ಸಭೆ' ಎಂಬ ಪದವನ್ನು 2019ರ ಆಗಸ್ಟ್ 5ರಂದು 'ಶಾಸಕಾಂಗ ಸಭೆ' ಎಂಬುದಾಗಿ ಬದಲಾಯಿಸಲಾಯಿದ್ದು ಹೇಗೆ ಎಂಬುದನ್ನು ವಿವರಿಸಿ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಚಂದ್ರಚೂಡ್ ಹೇಳಿದರು.
'2019ರ ವರೆಗೆ 370ನೇ ವಿಧಿಯನ್ನು ಹೇಗೆ ಅನುಷ್ಠಾನಗೊಳಿಸಲಾಗಿತ್ತು ಎಂಬುದನ್ನು ನಿಮಗೆ ವಿವರಿಸುವೆ. ಸಾಂವಿಧಾನಿಕ ಅಂಗಗಳಾದ ರಾಜ್ಯ ಸರ್ಕಾರ ಮತ್ತು ರಾಷ್ಟ್ರಪತಿ ಪರಸ್ಪರ ಸಮಾಲೋಚನೆ ನಡೆಸುವ ಮೂಲಕ, ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರಬಹುದು ಹಾಗೂ ಅದನ್ನು ಅಗತ್ಯಕ್ಕೆ ತಕ್ಕಂತೆ ಜಮ್ಮು-ಕಾಶ್ಮೀರಕ್ಕೆ ಅನ್ವಯಿಸಬಹುದು' ಎಂದು ಮೆಹ್ತಾ ಹೇಳಿದರು.
ವಾದ ಮಂಡನೆ ಅಪೂರ್ಣವಾದ ಹಿನ್ನೆಲೆಯಲ್ಲಿ ನ್ಯಾಯಪೀಠವು ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿತು.